ADVERTISEMENT

Karnataka Election 2023 | ಕನಕಪುರದಲ್ಲಿ ಡಿಕೆಶಿ ಓಟಕ್ಕಿಲ್ಲ ಲಗಾಮು

ಪ್ರತಿಪಕ್ಷಗಳಿಗೆ ಅಭ್ಯರ್ಥಿಯದ್ದೇ ಚಿಂತೆ

ಆರ್.ಜಿತೇಂದ್ರ
Published 27 ಜನವರಿ 2023, 5:07 IST
Last Updated 27 ಜನವರಿ 2023, 5:07 IST
   

ರಾಮನಗರ: ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ತವರು ಕ್ಷೇತ್ರದಲ್ಲಿ ಕಟ್ಟಿಹಾಕಬಲ್ಲ ಸಮರ್ಥ ಎದುರಾಳಿ ಪ್ರತಿಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲ.

ಬಂಡೆಗಳ ನಾಡು ಕನಕಪುರ ಗ್ರಾನೈಟ್‌ ಶಿಲೆಗೆ ಹೆಸರುವಾಸಿ. ಇಲ್ಲಿನ ರಾಜಕಾರಣವೂ ಆ ಶಿಲೆಯಷ್ಟೇ ನಾಜೂಕಿನದ್ದಾಗಿದೆ. ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್ ಭದ್ರಕೋಟೆ ಆಗಿರುವ ಈ ಊರಿನಲ್ಲಿ ಡಿಕೆಶಿ ಪಾಳಯಕ್ಕೆ ಠಕ್ಕರ್ ನೀಡಬಲ್ಲ ಪ್ರತಿಸ್ಪರ್ಧಿಗಳ ಕೊರತೆ ಇದೆ.

ಸೋಲಿಲ್ಲದ ಸರದಾರ: ಡಿ.ಕೆ. ಶಿವಕುಮಾರ್ ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡು ಸತತ ಏಳು ಬಾರಿ ಗೆಲುವಿನ ದಾಖಲೆ ಬರೆದಿದ್ದಾರೆ. ಈ ಹಿಂದೆ ಜನತಾ ಪರಿವಾರದ ಪಿಜಿಆರ್ ಸಿಂಧ್ಯಾ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಡಿಕೆಶಿ ಸಾತನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು.

ADVERTISEMENT

2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡನೆ ಆಗಿ, ಸಾತನೂರು ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡ ಬಳಿಕ ಡಿಕೆಶಿ ಕನಕಪುರ ಕ್ಷೇತ್ರಕ್ಕೆ ಬಂದರು. ಅವರಿಗೆ ಸಿಂಧ್ಯಾ ಜಾಗ ಬಿಟ್ಟು ಹೊರಬಂದರು. ಅಲ್ಲಿಂದ ಜನತಾ ಪರಿವಾರ ಹಾಗೂ ಈಗಿನ ಜಾತ್ಯತೀತ ಜನತಾದಳಕ್ಕೆ ಕನಕಪುರ ಭಾಗದಲ್ಲಿ ಸಮರ್ಥ ಸೇನಾನಿ ಸಿಕ್ಕಿಲ್ಲ.

2008ರ ಚುನಾವಣೆಯಲ್ಲಿ ಶಿವಕುಮಾರ್‌ಗೆ ಸೋಲಿನ ಭೀತಿ ಹುಟ್ಟಿಸಿ ಕೇವಲ 8 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿ.ಎಂ. ವಿಶ್ವನಾಥ್‌ ಈಚೆಗಷ್ಟೇ ಡಿಕೆಶಿ ಪಾಳಯ ಸೇರಿಕೊಂಡಿದ್ದಾರೆ. 2013ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿದ್ದ ಪಿಜಿಆರ್ ಸಿಂಧ್ಯಾ ಸದ್ಯ ಸಕ್ರಿಯ ರಾಜಕಾರಣದಿಂದ ದೂರವೇ ಇದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾರಾಯಣ ಗೌಡ ಕಡೆ ಕ್ಷಣದಲ್ಲಿ ಅಭ್ಯರ್ಥಿ ಆಗಿದ್ದರು. ಪಕ್ಷದ ವರಿಷ್ಠರೂ ಇತ್ತ ಪ್ರಚಾರಕ್ಕೆ ಬರಲಿಲ್ಲ. ಹೀಗಿದ್ದೂ ಜೆಡಿಎಸ್‌ 47,643 ಮತದಾರರನ್ನು ಸೆಳೆಯುವಲ್ಲಿ ಯಶಸ್ವಿ ಆಗಿತ್ತು. ಇಲ್ಲಿ ಹಿಂದಿನಿಂದಲೂ ಈ ಪಕ್ಷಕ್ಕೆ ತನ್ನದೇ ಆದ ಸಾಂಪ್ರದಾಯಿಕ ಮತಗಳಿವೆ. ಈಚೆಗಷ್ಟೇ ಪಂಚರತ್ನ ಯಾತ್ರೆ ಮೂಲಕ ಕನಕಪುರದಲ್ಲಿ ಅಬ್ಬರಿಸಿ ಹೋಗಿರುವ ಎಚ್‌.ಡಿ. ಕುಮಾರಸ್ವಾಮಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚಿಂತೆ ಮಾಡಿಲ್ಲ.

ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ನಾರಾಯಣ ಗೌಡ ಈ ಬಾರಿಯೂ ಜೆಡಿಎಸ್‌ನ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಲವು ಬಾರಿ ಸ್ಪರ್ಧಿಸಿದ್ದರೂ ಗೆಲುವು ಅವರ ಕೈ ಹಿಡಿದಿಲ್ಲ.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು ಸಹ ಆಕಾಂಕ್ಷಿ ಆಗಿದ್ದಾರೆ.

ಕನಕಪುರದವರೇ ಆದ ಅವರು ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಲ್ಲಹಳ್ಳಿ ಶಿವಕುಮಾರ್‌ ಹೆಸರೂ ಸಹ ಕೇಳಿ ಬರುತ್ತಿದೆ.

ಬಿಜೆಪಿಗೆ ಕನಕಪುರದಲ್ಲಿ ಪಕ್ಷ ಸಂಘಟನೆಯದ್ದೇ ಚಿಂತೆ ಆಗಿದೆ. ಇರುವ ಕೆಲವೇ ಮಂದಿ ಮುಖಂಡರು, ಕಾರ್ಯಕರ್ತರಲ್ಲೂ ಗುಂಪುಗಾರಿಕೆ ಇದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಇದೆ.

ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ನಂದಿನಿ ಗೌಡ ಈ ಬಾರಿಯೂ ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಇದ್ದಾರೆ. ಬಿಜೆಪಿಯ ಕನಕಪುರ ಪ್ರಭಾರಿ ಆಗಿರುವ ಸೀಗೆಕೋಟೆ ರವಿಕುಮಾರ್‌ ಹೆಸರು ಸಹ ಚಾಲ್ತಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.