ADVERTISEMENT

Karnataka Election 2023 | ಜೆಡಿಎಸ್‌ ಪಾಲಿಗೆ ಕಗ್ಗಂಟಾದ ‘ರಕ್ಷಣೆ’ ಸೂತ್ರ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 0:15 IST
Last Updated 1 ಮಾರ್ಚ್ 2023, 0:15 IST
   

ಬೆಂಗಳೂರು: ವಲಸೆ ರಾಜಕಾರಣದ ಭೀತಿಯಿಂದ ಪಕ್ಷವನ್ನು ಉಳಿಸಿಕೊಳ್ಳಲು ಆಯ್ದುಕೊಂಡಿದ್ದ ‘ಕುಟುಂಬ ರಾಜಕಾರಣ’ದ ಅಸ್ತ್ರ ಜೆಡಿಎಸ್‌ ವರಿಷ್ಠರನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಕುಟುಂಬದೊಳಗೆ ಹೆಚ್ಚುತ್ತಿರುವ ಆಕಾಂಕ್ಷಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪಕ್ಷದ ನಾಯಕರು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡ್ಯ, ರಾಮನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅನಾಯಾಸವಾಗಿ ಗೆದ್ದು ಶಾಸಕರಾಗಿ ಆಯ್ಕೆಯಾದ ಕೆಲವರು ಅಲ್ಪಾವಧಿಯಲ್ಲೇ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದರು. ಬಳಿಕ ಎಚ್‌.ಡಿ. ದೇವೇಗೌಡರ ಕುಟುಂಬದ ಸದಸ್ಯರನ್ನು ಸರಣಿಯೋಪಾದಿಯಲ್ಲಿ ಚುನಾವಣಾ ಕಣಕ್ಕಿಳಿಸುವ ಪರಿಪಾಟ ಆರಂಭವಾಗಿತ್ತು. ಅವರ ಕುಟುಂಬದಲ್ಲೇ ಇಬ್ಬರು ಸಂಸದರು, ಮೂವರು ಶಾಸಕರು ಇದ್ದಾರೆ. ಹತ್ತಿರದ ಸಂಬಂಧಿಗಳಿಬ್ಬರು ಶಾಸಕರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಗೌಡರ ಕುಟುಂಬದ ಸದಸ್ಯರು, ಸಂಬಂಧಿಕರಲ್ಲಿ ಮತ್ತಷ್ಟು ಮಂದಿ ಸಜ್ಜಾಗಿದ್ದಾರೆ.

‘ಬೇರೆಯವರನ್ನು ಕರೆತಂದು ಟಿಕೆಟ್‌ ಕೊಟ್ಟು, ಚುನಾವಣೆಯಲ್ಲಿ ಗೆಲ್ಲಿಸಬಹುದು. ಆದರೆ, ಅವರು ಪಕ್ಷಾಂತರ ಮಾಡುವುದನ್ನು ತಡೆಯುವುದು ಕಷ್ಟ. ಹೀಗಾಗಿ ಪಕ್ಷವನ್ನು ಉಳಿಸಿಕೊಳ್ಳುವುದಕ್ಕಾಗಿ ಕುಟುಂಬದವರನ್ನೇ ಕಣಕ್ಕಿಳಿಸಿ, ಗೆಲ್ಲಿಸುತ್ತಿದ್ದೇವೆ’ ಎಂದು ‘ಕುಟುಂಬ ರಾಜಕಾರಣ’ದ ನಡೆಯನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದರು. ಪಕ್ಷ ರಕ್ಷಿಸಿಕೊಳ್ಳಲು ಕುಟುಂಬ ರಾಜಕಾರಣ ಅನಿವಾರ್ಯ ಎಂಬ ಸೂತ್ರವನ್ನು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಬಿಟ್ಟಿದ್ದರು.

ADVERTISEMENT

ಆರಂಭದ ಕೆಲವು ದಶಕಗಳ ಕಾಲ ಎಚ್‌.ಡಿ. ದೇವೇಗೌಡರ ಕುಟುಂಬದ ಬೆರಳೆಣಿಕೆಯ ಸದಸ್ಯರಷ್ಟೇ ಸಕ್ರಿಯ ರಾಜಕಾರಣದಲ್ಲಿದ್ದರು. ನಂತರ ಎಚ್‌.ಡಿ. ರೇವಣ್ಣ ಅಖಾಡಕ್ಕಿಳಿದು ಯಶಸ್ವಿಯಾಗಿದ್ದರು. ಬಳಿಕ ಎಚ್‌.ಡಿ. ಕುಮಾರಸ್ವಾಮಿ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆ ಏರಿದರು. ಅನಿತಾ ಕುಮಾರಸ್ವಾಮಿ ಅವರ ಪ್ರವೇಶದಿಂದ ಕುಟುಂಬ ರಾಜಕಾರಣ ಮತ್ತಷ್ಟು ವಿಸ್ತರಿಸಿಕೊಂಡಿತ್ತು. ಈಗ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ಕುಟುಂಬದ ಎಲ್ಲ ಸದಸ್ಯರೂ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಜತೆಯಲ್ಲೇ ‘ಕುಟುಂಬ ರಾಜಕಾರಣ’ವೇ ಜೆಡಿಎಸ್‌ನ ನಡೆಯನ್ನು ನಿರ್ಧರಿಸುವ ಸನ್ನಿವೇಶಗಳು ಈಗ ಗೋಚರಿಸುತ್ತಿವೆ.

ಹಾಸನ ಕ್ಷೇತ್ರವೇ ಕಗ್ಗಂಟು: ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್‌ಗೆ ಪಟ್ಟು ಹಿಡಿಯುವುದರೊಂದಿಗೆ ‘ಕುಟುಂಬ ರಾಜಕಾರಣ’ದ ಸೂತ್ರ ಈಗ ಜೆಡಿಎಸ್‌ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಡಿಸೆಂಬರ್‌ ನಾಲ್ಕನೇ ವಾರದಲ್ಲೇ 93 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಪಟ್ಟಿ ಪ್ರಕಟಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕೆಲವೇ ದಿನಗಳೊಳಗೆ ಎರಡನೇ ಪಟ್ಟಿ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಯು ಜೆಡಿಎಸ್‌ ವರಿಷ್ಠರ ಕುಟುಂಬವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ.

‘ಇತರ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದವರನ್ನು ಸಮಾಧಾನಪಡಿಸಿದಷ್ಟು ಸುಲಭವಾಗಿ ಹಾಸನ ಕ್ಷೇತ್ರದ ಸಮಸ್ಯೆ ಬಗೆಹರಿಯುತ್ತಿಲ್ಲ. ರೇವಣ್ಣ ಅವರ ಮಕ್ಕಳಾದ ಪ್ರಜ್ವಲ್‌ ಮತ್ತು ಸೂರಜ್‌ ತಾಯಿಯ ಬೆಂಬಲಕ್ಕೆ ಬಲವಾಗಿ ನಿಂತಿದ್ದಾರೆ. ಭವಾನಿ ಕೂಡ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಚುನಾವಣಾ ಕಣಕ್ಕಿಳಿಯಲು ದೇವೇಗೌಡರ ಕುಟುಂಬದ ಇನ್ನಷ್ಟು ಮಂದಿ ಬಯಸುತ್ತಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಆಧರಿಸಿ ಎಲ್ಲವೂ ನಿರ್ಧಾರ ಆಗಬಹುದು‘ ಎನ್ನುತ್ತಾರೆ ಈ ಬೆಳವಣಿಗೆಗಳನ್ನು ಸಮೀಪದಿಂದ ಬಲ್ಲ ಜೆಡಿಎಸ್‌ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.