BJP
ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಇಂದು ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ ಅನ್ನು ಬಿಜೆಪಿ ಪರಾಭವಗೊಳಿಸಿ ಸ್ಪಷ್ಟ ಬಹುಮತಗಳೊಂದಿಗೆ ಅಧಿಕಾರಕ್ಕೇರಲಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿರಲಿದೆ ಎಂದು ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಮತ್ತು ಕೊಡೆಮೊ ಟೆಕ್ನಾಲಜೀಸ್ ನಡೆಸಿದ ಸಮೀಕ್ಷಾ ವರದಿ ಹೇಳಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಈಗಲೂ ಅತ್ಯಂತ ಪ್ರಮುಖ ಆಯ್ಕೆ ಎಂದು ಈ ಸಮೀಕ್ಷೆ ಹೇಳಿದೆ.
ಸುಮಾರು ಒಂದು ತಿಂಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ 10,481 ಜನರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಚುನಾವಣೆ ನಡೆದರೆ ಬಿಜೆಪಿ 136ರಿಂದ 159 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. ಕಾಂಗ್ರೆಸ್ 62ರಿಂದ 82 ಸೀಟುಗಳನ್ನು ಪಡೆಯಲಿದೆ. 2023ರ ಚುನಾವಣೆಯಲ್ಲಿ ಶೇ 42.88ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್, ಈಗ ಚುನಾವಣೆ ನಡೆದರೆ ಮತಗಳಿಕೆ ಪ್ರಮಾಣ ಶೇ 40.3ಕ್ಕೆ ಕುಸಿಯಲಿದೆ. ಸದ್ಯ ಕಾಂಗ್ರೆಸ್ ಆಡಳಿತ ವಿರೋಧ ಅಲೆ ಎದುರಿಸುತ್ತಿದೆ ಎಂದು ಸಮೀಕ್ಷೆ ಹೇಳಿರುವುದಾಗಿ ವರದಿಯಾಗಿದೆ.
ಜೆಡಿಎಸ್ ಕೇವಲ 3ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿದ್ದು, ಅದರ ಮತಗಳಿಕೆ ಪ್ರಮಾಣ ಶೇ 5ಕ್ಕೆ ಕುಸಿಯಲಿದೆ. 2023ರಲ್ಲಿ ಜೆಡಿಎಸ್ ಶೇ 18.3ರಷ್ಟು ಮತಗಳನ್ನು ಪಡೆದಿತ್ತು. ಆ ಮೂಲಕ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ರಾಜ್ಯ ರಾಜಕಾರಣದಲ್ಲಿ ಕಳೆದ 20 ವರ್ಷಗಳಲ್ಲಿ (2004, 2008, 2018) ಬಿಜೆಪಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧಿಕಾರದ ಗದ್ದುಗೆ ಏರಲು ಸ್ಪಷ್ಟ ಬಹುಮತ (224ರಲ್ಲಿ 113 ಸೀಟುಗಳು) ಪಡೆಯುವಲ್ಲಿ ವಿಫಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಈಗಲೂ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಶೇ 29.2ರಷ್ಟು ಮತದಾರರು ಸಿದ್ದರಾಮಯ್ಯ ಅವರಿಗಾಗಿ ಮತ ಹಾಕಲಿದ್ದಾರೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ಮತ ಹಾಕುವವರ ಸಂಖ್ಯೆ ಶೇ 10.7ರಷ್ಟು. ಬಿ.ಎಸ್. ಯಡಿಯೂರಪ್ಪ ಅವರಿಗಾಗಿ ಮತಹಾಕುವವರ ಸಂಖ್ಯೆ ಶೇ 5.5, ಬಸವರಾಜ ಬೊಮ್ಮಾಯಿಗೆ ಶೇ 3.6, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರವಾಗಿ ಶೇ 5.2ರಷ್ಟು ಮತಗಳು ಆಯಾ ಪಕ್ಷಗಳಿಗೆ ಸಿಗುವ ಸಾಧ್ಯತೆಗಳಿವೆ. ಬಿಜೆಪಿಯ ಯಾವುದೇ ಅಭ್ಯರ್ಥಿಗೆ ಶೇ 16.9ರಷ್ಟು ಮತಗಳು ಸಿಗಲಿವೆ ಎಂದು ಸಮೀಕ್ಷೆ ಹೇಳಿದೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಅಥವಾ ಅತ್ಯುತ್ತಮ ಎಂದವರು ಶೇ 48.4ರಷ್ಟು ಜನ. ಕಳಪೆ ಅಥವಾ ತೀರಾ ಕಳಪೆ qಎಂದವರ ಸಂಖ್ಯೆ ಶೇ 51.6ರಷ್ಟು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಸಮೀಕ್ಷೆ) ಪರವಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 42.3ರಷ್ಟು (ಇವರಲ್ಲಿ ಶೇ 26.3ರಷ್ಟು ಪೂರ್ಣ ಹಾಗೂ ಶೇ 16ರಷ್ಟು ಭಾಗಶಃ) ಜನರಿದ್ದಾರೆ. ಶೇ 35ರಷ್ಟು ಜನ ವರದಿಯನ್ನು ನಂಬುವುದಿಲ್ಲ ಎಂದಿದ್ದಾರೆ. ಶೇ 22.7ರಷ್ಟು ಜನರಿಗೆ ವರದಿ ಕುರಿತು ಮಾಹಿತಿಯೇ ಇಲ್ಲ ಎಂದೆನ್ನಲಾಗಿದೆ.
ಶೇ 39.6ರಷ್ಟು ಜನರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದಿದ್ದಾರೆ. ಶೇ 18.5ರಷ್ಟು ಜನರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮನೆಯ ಯಜಮಾನಿಗೆ ಮಾಸಿಕ ₹2 ಸಾವಿರ ನೀಡುವ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 45.4ರಷ್ಟು ಜನರು ಹೇಳಿದ್ದಾರೆ. ನಂತರದ ಸ್ಥಾನದಲ್ಲಿ ಶಕ್ತಿ (ಶೇ 19), ಅನ್ನಭಾಗ್ಯ (ಶೇ 17), ಗೃಹ ಜ್ಯೋತಿ (ಶೇ 13.5), ಯುವ ನಿಧಿ (ಶೇ 2) ಸ್ಥಾನ ಪಡೆದಿವೆ. ಶೇ 3ರಷ್ಟು ಜನರಿಗೆ ಗ್ಯಾರಂಟಿಗಳ ಮಾಹಿತಿ ಇಲ್ಲ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.