ADVERTISEMENT

Karnataka Elections: ರಾಜ್ಯದತ್ತ ಕಾಂಗ್ರೆಸ್‌ನ ಮೂರು ಮಾಜಿ ಸಂಸದರ ಚಿತ್ತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 2:39 IST
Last Updated 23 ನವೆಂಬರ್ 2022, 2:39 IST
   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಬಯಸಿ ಕಾಂಗ್ರೆಸ್‌ನ ಮೂವರು ಮಾಜಿ ಸಂಸದರು ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ, ರಾಜ್ಯ ರಾಜಕಾರಣದತ್ತ ಅವರ ಚಿತ್ತ ನೆಟ್ಟಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿ ಕೋಲಾರದ ಕೆ.ಎಚ್. ಮುನಿಯಪ್ಪ, ಚಿತ್ರದುರ್ಗದ ಬಿ.ಎನ್‌. ಚಂದ್ರಪ್ಪ ಮತ್ತು ಚಾಮರಾಜನಗರ ಕ್ಷೇತ್ರದಆರ್‌. ಧ್ರುವನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿದ್ದ ಈ ‘ಕೈ’ ನಾಯಕರಿಗೆ ಇದೀಗ ರಾಜ್ಯ ರಾಜಕಾರಣದತ್ತ ಒಲವು ಮೂಡಿದೆ.

ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ಬಯಸಿ ಧ್ರುವನಾರಾಯಣ್ ಅವರು ಕೆಲವು ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಎಚ್.ಸಿ. ಮಹದೇವಪ್ಪ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೇ ಅರ್ಜಿ ಸಲ್ಲಿಸಿರುವ ಅವರು, ಅಲ್ಲಿ ತಾವು ಕೂಡಾ ಪ್ರಬಲ ಆಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ.

ADVERTISEMENT

ಅರ್ಜಿ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ (ನ. 21) ರಾತ್ರಿ ಚಂದ್ರಪ್ಪ ಮತ್ತು ಮುನಿಯಪ್ಪ ಅವರು ತರಾತುರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಿಬ್ಬರೂ ಯಾವುದೇ ಕ್ಷೇತ್ರವನ್ನು ಅರ್ಜಿಯಲ್ಲಿ ಪ್ರಸ್ತಾಪಿಸದೆ, ಆಯ್ಕೆಯ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದುಉಲ್ಲೇಖಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದಡಿ.ಕೆ. ಸುರೇಶ್ ಕೂಡಾ ರಾಜ್ಯ ರಾಜಕಾರಣಕ್ಕೆ ಕಾಲಿಡುವ ಮನಸ್ಸು ಹೊಂದಿದ್ದರು. ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆಯನ್ನು ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದರು. ಆದರೆ, ಸುರೇಶ್ ದೆಹಲಿ ಮಟ್ಟದಲ್ಲಿಯೇ ಉಳಿದುಕೊಳ್ಳಲಿ ಎಂಬ ತೀರ್ಮಾನಕ್ಕೆ ಅವರ ಅಣ್ಣನೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಂದಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.