ADVERTISEMENT

ಜ. 1ರೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 22:15 IST
Last Updated 18 ಡಿಸೆಂಬರ್ 2022, 22:15 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ಸುರ್ಜೆವಾಲಾ ಅವರು ಚರ್ಚೆಯಲ್ಲಿ ಪಾಲ್ಗೊಂಡರು  – ‍ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ಸುರ್ಜೆವಾಲಾ ಅವರು ಚರ್ಚೆಯಲ್ಲಿ ಪಾಲ್ಗೊಂಡರು – ‍ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜನವರಿ 1ರೊಳಗೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ನಗರದಲ್ಲಿ ಭಾನುವಾರ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಸಂಬಂಧಿಸಿದಂತೆ ಮೊದಲ ಸಭೆ ಬೆಳಗಾವಿಯಲ್ಲಿ ನಡೆದಿದೆ. ಎರಡೂವರೆ ತಾಸು ಚರ್ಚಿಸಿ ಒಟ್ಟಾರೆ ತೀರ್ಮಾನಕ್ಕೆ ಬಂದಿದ್ದೇವೆ. ಈವರೆಗೆ ರಾಜ್ಯದ 224 ಕ್ಷೇತ್ರಗಳು ಸೇರಿ 1,350 ಟಿಕೆಟ್‌ ಆಕಾಂಕ್ಷಿಗಳ ಅರ್ಜಿಗಳು ಬಂದಿವೆ. ಆದರೆ, ಕಾರ್ಯಕರ್ತರ ಅಭಿಪ್ರಾಯ ಹಾಗೂ ಆಯ್ಕೆಯೇ ನಮ್ಮದೂ ಆಗಬೇಕು ಎಂಬ ಕಾರಣಕ್ಕೆ ನಿರ್ಧಾರ ವನ್ನು ಅವರಿಗೇ ಬಿಡುತ್ತೇವೆ’ ಎಂದರು.

‘ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಮರಳಿ ಆಯಾ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಕಳುಹಿಸುತ್ತೇವೆ. ಕೆಪಿಸಿಸಿಯ ಐವರು ಕಾರ್ಯಾಧ್ಯಕ್ಷರು, ಜಿಲ್ಲಾ ಮುಖಂಡರು, ಪ್ರತಿಯೊಂದು ಬ್ಲಾಕ್‌ ಘಟಕದವರೂ ಕುಳಿತು ಚರ್ಚಿಸಬೇಕು. ಒಂದು ಕ್ಷೇತ್ರದಿಂದ ಗರಿಷ್ಠ ಮೂವರ ಹೆಸರನ್ನು ಮಾತ್ರ ಸೂಚಿಸಲು ತಿಳಿಸಲಾಗುವುದು’ ಎಂದೂ ಹೇಳಿದರು.

ADVERTISEMENT

‘ಕಾಂಗ್ರೆಸ್‌ಗೆ ಕಾರ್ಯಕರ್ತರೇ ಮೂಲ ಆಧಾರ ಸ್ತಂಭ. ಅವರ ಅಭಿಪ್ರಾಯ ಪಡೆದೇ ಮುನ್ನಡೆಯುತ್ತೇವೆ. ಡಿ. 31ರೊಳಗೆ ಅವರು ಸಭೆ ನಡೆಸಿ, ಜನವರಿ 1ರಂದು ಪಟ್ಟಿ ನೀಡುತ್ತಾರೆ’ ಎಂದರು.

‘ಪಕ್ಷದ ಅಭ್ಯರ್ಥಿಗಳನ್ನು ಯಾರು ಬೇಕಾದರೂ, ಎಲ್ಲೆಂದರಲ್ಲಿ ಘೋಷಣೆ ಮಾಡಲು ಅವಕಾಶವಿಲ್ಲ. ಹಾಗೊಂದು ವೇಳೆ ಯಾರಾದರೂ ಘೋಷಣೆ ಮಾಡಿದರೆ ಅವರಿಗೆ ನೋಟಿಸ್‌ ನೀಡುತ್ತೇವೆ’ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ‘ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಹಾಕಿದ ಬಗ್ಗೆ ಗೊತ್ತಿಲ್ಲ. ನಾಳೆ ನೋಡಿ ಮಾತನಾ ಡುತ್ತೇನೆ’ ಎಂದರು.

ಇದಕ್ಕೂ ಮುನ್ನ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾರ್ಗಸೂಚಿ ರೂಪುರೇಷೆಗಳ ಬಗ್ಗೆ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಸತೀಶ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ಎಚ್.ಸಿ. ಮಹದೇವಪ್ಪ ಸೇರಿ 41 ಶಾಸಕರು, ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.