ADVERTISEMENT

Karnataka Elections 2023: ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 21:45 IST
Last Updated 24 ಫೆಬ್ರುವರಿ 2023, 21:45 IST
   

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಜಿಲ್ಲೆಯ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ಭಾನುವಾರ ಕರೆಯಲಾಗಿದೆ.

ಕ್ಷೇತ್ರದ 300ಕ್ಕೂ ಅಧಿಕ ಮುಖಂಡರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಪದಾಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಹಾಸನ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಿದರೆ, ಜೆಡಿಎಸ್ ಗೆಲುವು ಸಾಧಿಸಬಹುದು ಎನ್ನುವ ಚರ್ಚೆ ನಡೆಸಲಾಗುತ್ತಿದೆ. ನಂತರ ಟಿಕೆಟ್‌ ಘೋಷಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್‌ ಅವರು ತಾಲ್ಲೂಕಿನ ನಿಟ್ಟೂರು, ಸಾಲಗಾಮೆ ಹೋಬಳಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿದ್ದಾರೆ.

ADVERTISEMENT

ಮಾಜಿ ಶಾಸಕ ಬಿ.ವಿ.ಕರೀಗೌಡ ಮಾತನಾಡಿ, ‘ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ಸ್ವೀಕರಿಸಲು ಭವಾನಿ ಅವರೇ ಸೂಕ್ತ. ಶಾಸಕರು ಪಂಥಾಹ್ವಾನ ನೀಡದಿದ್ದರೆ, ರೇವಣ್ಣ ಕುಟುಂಬದವರು ಹಾಸನಕ್ಕೆ ಬರುವ ಪ್ರಶ್ನೆಯೇ ಇರುತ್ತಿರಲಿಲ್ಲ’ ಎಂದಿದ್ದಾರೆ. ಶಾಸಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದ ಪ್ರಜ್ವಲ್‌ ರೇವಣ್ಣ, ‘ನಮ್ಮ ಕುಟುಂಬಕ್ಕೆ ಪಂಥಾಹ್ವಾನ ನೀಡಿದ್ದಾರೆ. ನಮ್ಮ ತಾಯಿಯ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ನಮಗೆ ಶಕ್ತಿ ಇಲ್ಲವೇ?’ ಎಂದು ಕೇಳಿದ್ದಾರೆ.

ಮತ್ತೊಬ್ಬ ಪ್ರಬಲ ಆಕಾಂಕ್ಷಿ ಎಚ್‌.ಪಿ.ಸ್ವರೂಪ್‌ ಕೂಡ ಪ್ರಚಾರ ಶುರು ಮಾಡಿದ್ದಾರೆ. ಆದರೆ, ರೇವಣ್ಣ ಕುಟುಂಬದ ಭರಾಟೆ
ಯನ್ನು ನೋಡುತ್ತಿರುವ ಕಾರ್ಯಕರ್ತರು, ‘ಭವಾನಿ ರೇವಣ್ಣ ಅವರೇ ಕಣಕ್ಕಿಳಿಯುವುದು ನಿಶ್ಚಿತ’ ಎನ್ನುತ್ತಿದ್ದಾರೆ.

‘ಟಿಕೆಟ್‌ ಕೊಡಿಸುವುದು ನಿಮ್ಮ ಜವಾಬ್ದಾರಿ. ಪಕ್ಷವನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ’ ಎಂದು ರೇವಣ್ಣ ಅವರಿಗೆ ಭವಾನಿ ಹೇಳಿದ್ದಾರೆ. ಈ ಬಗ್ಗೆ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಜೊತೆ ರೇವಣ್ಣ ಚರ್ಚಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.