ADVERTISEMENT

ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 13:09 IST
Last Updated 22 ಆಗಸ್ಟ್ 2023, 13:09 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ವಿಜಯನಗರ ಅರಸರ ವಂಶಸ್ಥ ಹಾಗೂ ಮಾಜಿ ಸಚಿವ ಶ್ರೀರಂಗದೇವರಾಯಲು (87) ಅವರು ಗಂಗಾವತಿಯ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಪತ್ನಿ ಲಲಿತಾರಾಣಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

1974ರಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದ ಅವರು 2004ರಲ್ಲಿ ಸೋತ ನಂತರ ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದರು.

1974, 1978ರಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಎರಡೂ ಸಲ ಸೋತಿದ್ದರು. ನಂತರ 1983, 1985ರಲ್ಲಿ ಕನಕಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 1989, 1994, 1999ರಲ್ಲಿ ಮೂರು ಬಾರಿ ಗಂಗಾವತಿ ಕ್ಷೇತ್ರದಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.

ADVERTISEMENT

ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ (ಈಗಿನ ಕೆಕೆಆರ್‌ಡಿಬಿ) ಮೊದಲ ಅಧ್ಯಕ್ಷರಾಗಿದ್ದರು. ಸ್ವಗ್ರಾಮ ಆನೆಗೊಂದಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದರು.

ಸರಳ ರಾಜಕಾರಣಿ:

ಸರಳ, ಮೌಲ್ಯಾಧಾರಿತ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತಿದ್ದ ರಾಜಕಾರಣಿ ಇವರಾಗಿದ್ದರು. ರಾಜ ಮನೆತನದವರಾದರೂ ಜನರೊಂದಿಗೆ ಆಪ್ತತೆಯಿಂದ ಬೆರೆಯುತ್ತಿದ್ದ ನಿಜವಾದ ಅರ್ಥದಲ್ಲಿ ಜನಪ್ರಿಯ ಎಂ.ಎಲ್.ಎ. ಆಗಿದ್ದರು ಎಂದು ಅವರನ್ನು ಹತ್ತಿರದಿಂದ ಕಂಡ ಉಪನ್ಯಾಸಕ ಗುಂಡೂರು ಪವನ ಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.