ಬೆಂಗಳೂರು: ‘ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನ ಮಾಡಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪುಂಡರು ದಬ್ಬಾಳಿಕೆ ನಡೆಸಿದ್ದಾರೆ. ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಿ’ ಎಂದು ನಿರ್ಮಾಪಕ ಸಾ.ರಾ.ಗೋವಿಂದ್ ಆಗ್ರಹಿಸಿದ್ದಾರೆ.
ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಎಂಇಎಸ್ ನಿಷೇಧಿಸಿದರಷ್ಟೇ ಇಂಥ ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕಬಹುದು. ವರನಟ ಡಾ.ರಾಜ್‌ಕುಮಾರ್ ಅವರು ಈ ನಾಡಿಗೆ, ಭಾಷೆಗೆ, ನೆಲ ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಈ ಭದ್ರ ಬುನಾದಿಯಲ್ಲಿ ನಾವಿದ್ದೇವೆ. ಭಾಷಾವಾರು ಪ್ರಾಂತ್ಯ ಮಾಡಿದ ಮೇಲೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಅಗ್ರಪೀಠ. ಆಡಳಿತಕ್ಕೆ ಬಂದ ಸರ್ಕಾರಗಳು ಕೇವಲ ಮತಭಿಕ್ಷೆಗಾಗಿ ಕನ್ನಡಿಗರ ಮಾನ,
ಮರ್ಯಾದೆ, ಗೌರವವನ್ನು ಹರಾಜು ಹಾಕುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಲಿ’ ಎಂದರು.
‘ನಾಡು, ನುಡಿಗೆ ಅನ್ಯಾಯವಾದಾಗ ಇಡೀಚಿತ್ರೋದ್ಯಮ ಒಂದಾಗಿರುತ್ತದೆ. ಸಮಯ ಬಂದಾಗ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಖ್ಯಮಂತ್ರಿಗಳು ಕಠಿಣ ನಿಲುವು ತೆಗೆದುಕೊಳ್ಳಲಿ. ಇಡೀ ರಾಜ್ಯದ ಜನತೆ ನಿಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದರು. ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ಮಾತನಾಡಿ, ‘ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲೆಲ್ಲಾ ಈ ರೀತಿ ಎಂಇಎಸ್ ತೊಂದರೆ ನೀಡುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿ ನಡೆಯುವ ಈ ಪುಂಡಾಟಕ್ಕೆ ಕೇಂದ್ರ ಸರ್ಕಾರವೂ ಕಡಿವಾಣ ಹಾಕಬೇಕು. ಕನ್ನಡಿಗರ ರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ರೀತಿ ಘಟನೆಗಳಾಗದಂತೆ ನಿಗಾವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.