ಬೆಂಗಳೂರು: ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇಕಡ 1ರಷ್ಟು ಅಗ್ನಿ ಸೆಸ್ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ–2025’ಕ್ಕೆ ವಿಧಾನ ಮಂಡಲದ ಉಭಯಸದನಗಳ ಅನುಮೋದನೆ ದೊರೆತಿದೆ.
21 ಮೀಟರ್‌ಗಿಂತಲೂ ಹೆಚ್ಚು ಎತ್ತರವಿರುವ ಬಹುಮಹಡಿ ಕಟ್ಟಡಗಳಿಗೆ, ಅವುಗಳ ತೆರಿಗೆಯ ಮೇಲೆ ಶೇ1ರಷ್ಟು ಅಗ್ನಿ ಸೆಸ್ ವಿಧಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ, ಅದು ಕಾಯ್ದೆಯಾಗಲಿದೆ. ನಂತರ ಬಹುಮಹಡಿ ಕಟ್ಟಡಗಳ ಮಾಲೀಕರು ಕಟ್ಟಬೇಕಾದ ತೆರಿಗೆಯ ಹೊರೆ ಹೆಚ್ಚಲಿದೆ.
ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಈ ಮಸೂದೆಯನ್ನು ಮಂಡಿಸಿದರು. ಅಗ್ನಿ ಸೆಸ್ ವಿಧಿಸುವುದಕ್ಕೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಈ ಸರ್ಕಾರವು ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಗಾಳಿಗೆ ತೆರಿಗೆ ವಿಧಿಸುವುದೊಂದೇ ಬಾಕಿ’ ಎಂದರು.
ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಪರಮೇಶ್ವರ, ‘ಬಹುಮಹಡಿ ಕಟ್ಟಡಗಳಿಗೆ ಅಗ್ನಿ ಸೆಸ್ ವಿಧಿಸುತ್ತಿಲ್ಲ. ಈ ಕ್ರಮ ಇಲ್ಲದೇ ಇರುವುದರಿಂದ ಸಂಭಾವ್ಯ ಆದಾಯ ಖೋತಾ ಆಗುತ್ತಿದೆ ಎಂದು ಭಾರತದ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿ ಆರು ಬಾರಿ ಪತ್ರ ಬರೆದಿದ್ದರು. ಅದರ ಆಧಾರದಲ್ಲಿ ಅಗ್ನಿ ಸೆಸ್ ವಿಧಿಸುತ್ತಿದ್ದೇವೆ’ ಎಂದರು.
ಇದ್ದರೂ ಇರದಂತಾದ ಅಗ್ನಿಶಾಮಕ ವಾಹನಗಳು
‘ಅಗ್ನಿಶಾಮಕ ದಳದ ಮಂಗಳೂರು ಘಟಕದಲ್ಲಿ ಐದು ಅಗ್ನಿಶಾಮಕ ವಾಹನಗಳಿವೆ. ಆದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಘಟಕದ ಎದುರಿನ ರಸ್ತೆಯಲ್ಲಿ ಬೆಂಕಿ ಬಿದ್ದರೂ ಆ ವಾಹನಗಳನ್ನು ರಸ್ತೆಗೆ ತರುವಂತಿಲ್ಲ...’ ಎಂದು ಅಗ್ನಿ ಸೆಸ್ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಐವನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಈ ಬಗ್ಗೆ ಉತ್ತರಿಸಿದ ಪರಮೇಶ್ವರ ‘15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ವಾಹನಗಳು 15 ವರ್ಷದಲ್ಲಿ 1000 ಕಿ.ಮೀ. ದೂರವನ್ನೂ ಕ್ರಮಿಸಿಲ್ಲ ಅಷ್ಟು ಹೊಸತಾಗಿವೆ’ ಎಂದರು. ‘ಸುಸ್ಥಿತಿಯಲ್ಲಿರುವ ಈ ವಾಹನಗಳು ಕೇಂದ್ರ ಸರ್ಕಾರದ ನೀತಿಯಿಂದ ನಿರುಪಯುಕ್ತವಾಗಿವೆ. ಈ ವಾಹನಗಳಿಗಾದರೂ ವಿನಾಯತಿ ನೀಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ವಿನಾಯತಿಗೆ ಅವರು ಒಪ್ಪಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.