
ಬೆಂಗಳೂರು: ‘ಅತಿವೃಷ್ಟಿಯಲ್ಲಿ ಸೂರು ಕಳೆದುಕೊಂಡ ರಾಜ್ಯದ 13,000 ಕುಟುಂಬಗಳಿಗೆ ಮನೆ ಯಾವಾಗ ನೀಡುತ್ತೀರಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಈಚೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದ ನಗರದ ಕೋಗಿಲು ಗ್ರಾಮದ ಕಲ್ಲು ಕ್ವಾರಿ ಪ್ರದೇಶದಲ್ಲಿ ಇರುವ ಫಕೀರ ಕಾಲೊನಿ ಮತ್ತು ವಸೀಂ ಕಾಲೊನಿಗೆ ಆರ್.ಅಶೋಕ ನೇತೃತ್ವದ ಬಿಜೆಪಿ ನಿಯೋಗವು ಬುಧವಾರ ಭೇಟಿ ನೀಡಿತ್ತು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ನಿಯೋಗದಲ್ಲಿ ಇದ್ದರು.
ತೆರವು ಕಾರ್ಯಾಚರಣೆಯಲ್ಲಿ ಕೆಡವಲಾದ ಮನೆಗಳ ಅವಶೇಷಗಳ ಮೇಲೆ ನಿರ್ಮಿಸಿಕೊಂಡಿರುವ ಟೆಂಟ್‌ಗಳನ್ನು ಪರಿಶೀಲಿಸಿದ ಅವರು, ಅಲ್ಲಿದ್ದವರಿಗೆ ಹತ್ತಾರು ಪ್ರಶ್ನೆಗಳನ್ನು ಹಾಕಿದರು. ‘ನಿಮ್ಮ ಊರು ಯಾವುದು? ಯಾವ ದೇಶದವರು? ಬಾಂಗ್ಲಾದವರಾ’ ಎಂದು ಪ್ರಶ್ನಿಸಿದರು.
‘ಎಷ್ಟು ವರ್ಷದಿಂದ ಇಲ್ಲಿದ್ದೀಯಮ್ಮಾ’ ಎಂದು ಮುಸ್ಲಿಂ ಮಹಿಳೆಯೊಬ್ಬರನ್ನು ಅಶೋಕ ಅವರು ಪ್ರಶ್ನಿಸಿದಾಗ ಆಕೆ, ‘25 ವರ್ಷಗಳಿಂದ’ ಎಂದು ಅರೆಬರೆ ಕನ್ನಡದಲ್ಲಿ ಉತ್ತರಿಸಿದರು. ಅದಕ್ಕೆ ಅಶೋಕ, ‘25 ವರ್ಷಗಳಿಂದ ಇಲ್ಲಿದ್ದರೆ ಕನ್ನಡ ಏಕೆ ಬರುವುದಿಲ್ಲ? ಸುಳ್ಳು ಹೇಳುತ್ತಿದ್ದೀರಾ’ ಎಂದು ಮರುಪ್ರಶ್ನಿಸಿದರು. ಮತ್ತೊಬ್ಬ ಮುಸ್ಲಿಂ ವ್ಯಕ್ತಿ ಕನ್ನಡದಲ್ಲಿ ಉತ್ತರಿಸಿದಾಗ, ‘ಬಿಜೆಪಿಯವರು ಇಲ್ಲಿಗೆ ಬರುತ್ತಾರೆಂದು ಗೊತ್ತಾದ ಮೇಲೆ ಕನ್ನಡ ಗೊತ್ತಿರುವವರನ್ನು ಇಲ್ಲಿಗೆ ಕರೆಸಿದ್ದಾರಾ’ ಎಂದು ಪ್ರಶ್ನಿಸಿದರು.
ಮನೆ ಕಳೆದುಕೊಂಡವರ ಆಧಾರ್ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಬಿಜೆಪಿ ನಾಯಕರು ಪರಿಶೀಲಿಸಿದರು. ಜತೆಗೆ ಅವರ ವಿವರಗಳನ್ನು ಬರೆದುಕೊಂಡರು.
ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅಶೋಕ ಅವರು, ‘ಇವರೆಲ್ಲಾ ಅಕ್ರಮ ವಲಸಿಗರು, ಬಾಂಗ್ಲಾದೇಶದಿಂದ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರವು ಇವರಿಗೆ ಯಾವ ಆಧಾರದಲ್ಲಿ ಮನೆ ನೀಡುತ್ತದೆ? ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 13,000 ಕುಟುಂಬಗಳು ಈಗಲೂ ಬೀದಿಯಲ್ಲಿವೆ. 2,500 ಶಾಲೆಗಳಿಗೆ ಹಾನಿಯಾಗಿದೆ. ಕನ್ನಡಿಗರಿಗೆ ಮನೆ ನೀಡದ ಸರ್ಕಾರ, ಅಕ್ರಮ ವಲಸಿಗರಿಗೆ ಫ್ಲ್ಯಾಟ್‌ಗಳನ್ನು ನೀಡುತ್ತಿದೆ. ಇಲ್ಲಿ ಮಿನಿ ಬಾಂಗ್ಲಾದೇಶ ನಿರ್ಮಿಸುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ 4 ಲಕ್ಷ ಬಡ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯುತ್ ಸಂಪರ್ಕ ಹೇಗೆ ನೀಡಿದರು’ ಎಂದು ಪ್ರಶ್ನಿಸಿದರು.
ಇಲ್ಲಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ರಾಜ್ಯ ಸರ್ಕಾರದ ಸಚಿವರೇ ಬಂದು ಬೇರೆಡೆಗೆ ಸ್ಥಳಾಂತರ ಮಾಡಿಸಿದ್ದಾರೆ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕುಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ
ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಕೆಲಸ ಆಗಬೇಕು. ಆದರೆ ರಾಜ್ಯ ಸರ್ಕಾರವು ಇಲ್ಲಿ ನೆಲೆಸಿದ್ದವರು ಬಾಂಗ್ಲಾದವರು ಎಂಬ ಸತ್ಯವನ್ನೇ ಮುಚ್ಚಿಹಾಕಲು ಹೊರಟಿದೆಸಿ.ಎನ್.ಅಶ್ವತ್ಥ ನಾರಾಯಣ್ ಬಿಜೆಪಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.