ADVERTISEMENT

ನೆರೆ ಪರಿಹಾರ: 9ರಂದು ಸಂಪುಟ ಉಪಸಮಿತಿ ಸಭೆ

ಕೇಂದ್ರದ ಮಧ್ಯಂತರ ಪರಿಹಾರ ಮನೆ ನಿರ್ಮಾಣ ಮತ್ತು ಬೆಳೆ ಕಳೆದುಕೊಂಡ ರೈತರಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:16 IST
Last Updated 5 ಅಕ್ಟೋಬರ್ 2019, 20:16 IST

ಬೆಂಗಳೂರು: ‘ರಾಜ್ಯದ ನೆರೆ ಪರಿಹಾರ ಕಾರ್ಯಗಳಿಗೆ ಕೇಂದ್ರವು ನೀಡಿರುವ ₹ 1,200 ಕೋಟಿ ಮಧ್ಯಂತರ ಪರಿಹಾರವನ್ನು ಮನೆ ನಿರ್ಮಾಣ ಮತ್ತು ಬೆಳೆ ಕಳೆದುಕೊಂಡ ರೈತರಿಗೆ ನೀಡಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ರಾಜ್ಯವು ಈಗಾಗಲೇ ಬಿಡುಗಡೆ ಮಾಡಿದ ₹ 2,577 ಕೋಟಿಗೆ ಈ ಮಧ್ಯಂತರ ಪರಿಹಾರ ಹೆಚ್ಚುವರಿ ಸೇರ್ಪಡೆಯಾಗಿರುತ್ತದೆ. ಖಜಾನೆಯಲ್ಲಿ ಹಣ ಇಲ್ಲ ಎಂಬ ಕಾರಣಕ್ಕೆ ಪರಿಹಾರ ಕಾರ್ಯ
ಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಸರಿಯಲ್ಲ’ ಎಂದು ಕಂದಾಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ.

‘ಕಂದಾಯ ಸಚಿವ ಆರ್.ಅಶೋಕ ಅವರ ನೇತೃತ್ವದ ಪ್ರಕೃತಿ ವಿಕೋಪಗಳ ಸಂಪುಟ ಉಪಸಮಿತಿ ಇದೇ 9ರಂದು ಸಭೆ ಸೇರಲಿದ್ದು, ಪರಿಹಾರ ನೀಡಿಕೆಯ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ. ನೆರೆಯಿಂದ ಅತ್ಯಂತ ಹಾನಿಗೊಳಗಾಗಿರುವ ಬೆಳಗಾವಿಯಲ್ಲಿ ಜಿಲ್ಲಾಡಳಿತದ ಬಳಿ ಈಗಲೂ ಕನಿಷ್ಠ ₹ 500 ಕೋಟಿ ಬಳಕೆಗೆ ಲಭ್ಯವಿದೆ’ ಎಂದರು.

ADVERTISEMENT

ಅಶೋಕ್‌ ಹೇಳಿಕೆ: ‘ನೆರೆಪೀಡಿತ ಪ್ರದೇಶಗಳಲ್ಲಿ ಮನೆ ಒಳಗೆ ನೀರು ನುಗ್ಗಿ ಹಾನಿಯಾದವರಿಗೂ ₹ 10,000 ನೀಡಲಾಗುವುದು. ಈ ಪೈಕಿ ₹ 3 ಸಾವಿರ ಕೇಂದ್ರದ ಅನುದಾನವಾಗಿರುತ್ತದೆ’ ಎಂದು ಕಂದಾಯ ಸಚಿವ
ಆರ್‌. ಅಶೋಕ ತಿಳಿಸಿದರು.

‘ಈ ಮೊದಲು ನೀರು ನುಗ್ಗಿದ ಮನೆಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿತ್ತು. ಆದರೆ, ಅಂತಹ ಮನೆಗಳಿಗೂ ಪರಿಹಾರ ಕೊಡಬೇಕು ಎಂಬುದು ನಮ್ಮ‌ ಅಭಿಪ್ರಾಯ‌.ಎನ್‌ಡಿಆರ್‌ಎಫ್‌ ನಿಯಮದಲ್ಲಿ ಅದಕ್ಕೆ ಅವಕಾಶ ಇದೆ. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ರಾಜ್ಯಕ್ಕೆ ₹ 3,891.80 ಕೋಟಿ ಪರಿಹಾರ ಮೊತ್ತ ಬರಬೇಕಾಗಿದೆ. ಈ ಸಂಬಂಧ ಎರಡು ದಿನದಲ್ಲಿ‌ ಮತ್ತೊಮ್ಮೆ ಮನವಿ ಕಳುಹಿಸುತ್ತೇವೆ’ ಎಂದರು.

ಕ್ರಮ: ಹೊಳೆನರಸೀಪುರ ತಹಶಿಲ್ದಾರರು ‘ಪಾರ್ಟಿ‘ ಮಾಡಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಅಧಿಕಾರಿಗಳಿಗೆ ನೊಟೀಸ್ ಜಾರಿ‌ ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಜೀವ ಇಲ್ಲವಾಗಿದ್ದು, ಸತ್ತುಹೋಗಿದೆ:ಸಿ.ಎಂ.ಇಬ್ರಾಹಿಂ

‘ರಾಜ್ಯ ಸರ್ಕಾರಕ್ಕೆ ಜೀವ ಇಲ್ಲವಾಗಿದ್ದು, ಸತ್ತುಹೋಗಿದೆ. ಸತ್ತರೂ ಮಾತನಾಡಬೇಡ ಎಂದು ಹೇಳುತ್ತಾರಲ್ಲ. ಇದಕ್ಕೆ ಏನು ಮಾಡುವುದು’ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಇದು ಬೈಠಕ್ ಸರ್ಕಾರ. ಕುಳಿತ ಮೇಲೆ ಎದ್ದೇಳಲು ಬಿಡಲ್ಲ.ನೆರೆ ಪೀಡಿತ ಪ್ರದೇಶಗಳಲ್ಲಿ ಜನರು ಬಳಲುತ್ತಿ
ದ್ದರೂ ಪರಿಹಾರ ಕಾರ್ಯಗಳು ತೆವಳುತ್ತಾ ಸಾಗಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖಜಾನೆ ಖಾಲಿಯಾಗಿದೆ ಎಂದಿದ್ದಾರೆ. ಜನರಿಗೆ ಪರಿಹಾರ ಸಿಗಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪ್ರವಾಹದಿಂದ ಎಲ್ಲವೂ ಕೊಚ್ಚಿಕೊಂಡು ಹೋಗಿದ್ದು, ₹1 ಲಕ್ಷ ಕೋಟಿ ನಷ್ಟ ಸಂಭವಿಸಿದ್ದರೆ, ರಾಜ್ಯ ಸರ್ಕಾರ ₹32 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಕೇವಲ ₹1200 ಕೋಟಿ ಬಿಡುಗಡೆ ಮಾಡಿದ್ದು, ಇದರಿಂದ ಯಾವ ಪರಿಹಾರ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ನೆರೆ ಹಾನಿ ಬಗ್ಗೆ ಸರಿಯಾಗಿ ಅಧ್ಯಯನವೇ ನಡೆದಿಲ್ಲ. ಈ ಬಗ್ಗೆ ಚರ್ಚಿಸಲು ಪ್ರಧಾನಿ ಬಳಿಗೆ ರಾಜ್ಯ ಸರ್ಕಾರ ನಿಯೋಗ ಕರೆದುಕೊಂಡು ಹೋಗಿಲ್ಲ. ಯಡಿಯೂರಪ್ಪ ಭೇಟಿಗೂ ಅವಕಾಶ ಸಿಕ್ಕಿಲ್ಲ. ರಾಜ್ಯಕ್ಕೆ ಪ್ರಧಾನಿ ಬಂದರೂ, ನೆರೆ ಪೀಡಿತ ಪ್ರದೇಶಗಳ ಕಡೆಗೆ ನೋಡಲಿಲ್ಲ. ಒಟ್ಟಾರೆ ರಾಜ್ಯವನ್ನು ತಬ್ಬಲಿ ಮಾಡಲಾಗಿದೆ ಎಂದು ದೂರಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ‘ಬಾಯಿ ಬಿಗಿಹಿಡಿದು ಮಾತನಾಡಿ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರಿಗೆ ಬಾಯಿ ಹಿಡಿದುಕೊಳ್ಳಬೇಕೊ, ಸೊಂಡಿಲು ಹಿಡಿದುಕೊಳ್ಳಬೇಕೊ ಎಂಬುದೇ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.