ADVERTISEMENT

ಅಸಹಾಯಕನಾಗಿ ಶಿರಾಗೆ ಹೋಗಿ ಬಂದಿದ್ದೇನೆ: ಗೋವಿಂದ ಕಾರಜೋಳ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 19:31 IST
Last Updated 17 ಅಕ್ಟೋಬರ್ 2020, 19:31 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ‘ನನಗೆ 70 ವರ್ಷ ವಯಸ್ಸಾಗಿದೆ. ಕೋವಿಡ್‌ ಕೂಡ ಬಾಧಿಸುತ್ತಿದೆ. ಹೀಗಾಗಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಲು ಹೋಗಲು ಆಗಲಿಲ್ಲ’ ಎಂದುಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರು ಹಾಕುತ್ತಲೇ ಪ್ರತಿಕ್ರಿಯಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡದೇ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಕುರಿತ ಟೀಕೆಗಳಿಗೆ ಶನಿವಾರ ಉತ್ತರಿಸಿದ ಅವರು, ‘ಕೋವಿಡ್‌ ಬಾಧಿಸುವುದಕ್ಕೂ ಮೊದಲೇ ನನ್ನನ್ನು ಶಿರಾ ಕ್ಷೇತ್ರದ ಉಸ್ತುವಾರಿ ಎಂದು ಘೋಷಿಸಿದ್ದರು. ಅರ್ಧ ಗಂಟೆಯಾದರೂ ಬಂದು ಮುಖ ತೋರಿಸಿ ಹೋಗಿ ಎಂದು ಅಭ್ಯರ್ಥಿ ಮನವಿ ಮಾಡಿದ್ದರು. ಅಸಹಾಯಕನಾಗಿ ಶಿರಾಗೆ ಹೋಗಿ ಬಂದಿದ್ದೇನೆ’ ಎಂದು ಕಣ್ಣೀರು ಹಾಕಿದರು.

‘70 ವರ್ಷ ವಯಸ್ಸಾಗಿದೆ. ನಾನೂ ಸೇರಿದಂತೆ ನಮ್ಮ ಇಡೀ ಕುಟುಂಬಕ್ಕೆ ಕೋವಿಡ್‌ ಬಾಧಿಸಿದೆ. ಹೆಚ್ಚು ಕೆಲಸ ಮಾಡಲು ಆಗುತ್ತಿಲ್ಲ. 600–700 ಕಿಲೋ ಮೀಟರ್‌ ದೂರ ಪ್ರಯಾಣ ಮಾಡುವುದು ಕಷ್ಟವಾಗಿದೆ. ಈ ಕಾರ
ಣಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕಂದಾಯ ಸಚಿವ ಆರ್‌. ಅಶೋಕ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿದ್ದಾರೆ’ ಎಂದರು.

ADVERTISEMENT

‘ಕೋವಿಡ್‌ ಲಾಕ್‌ಡೌನ್‌ ಅವಧಿಯುದ್ದಕ್ಕೂ ನಾನು ಹೇಗೆ ಕೆಲಸ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೋವಿಡ್‌ನಿಂದ ಆಸ್ಪತ್ರೆಯಲ್ಲಿದ್ದಾಗಲೂ ಮಳೆ ಆರಂಭವಾದ ದಿನದಿಂದಲೇ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸಿ ಏನು ಕೆಲಸ ಮಾಡಬೇಕು ಎಂಬುದಕ್ಕೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

‘ಶುಕ್ರವಾರ ಶಿರಾಕ್ಕೆ ಹೋಗಿ ಬಂದಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಅನಿವಾರ್ಯವಾಗಿತ್ತು, ಹೋಗಲೇಬೇಕಾಗಿತ್ತು. ಮೊದಲೇ ಚುನಾವಣೆಯ ಉಸ್ತುವಾರಿಯಾಗಿದ್ದೆ. ಸ್ಪರ್ಧಿಸಿರುವ ಅಭ್ಯರ್ಥಿ ಯುವಕ. ಅವರ ಭವಿಷ್ಯದ ಪ್ರಶ್ನೆ ಇದೆ. ಅರ್ಧ ಗಂಟೆಯಾದರೂ ನನ್ನ ಕಾರಣಕ್ಕೆ ಬಂದು, ಹೋಗಿ ಎಂದರು. ಅಸಹಾಯಕನಾಗಿ ಹೋಗಿ ಬಂದಿದ್ದೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.