ADVERTISEMENT

ಅಂತ್ಯ ಕಾಣದ ವಿಶ್ವಾಸ | ಕಲಾಪ ನಾಳೆಗೆ, ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 13:36 IST
Last Updated 18 ಜುಲೈ 2019, 13:36 IST
ಕಾಂಗ್ರೆಸ್‌ ಶಾಸಕರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರ: ಎಎನ್‌ಐ ಟ್ವೀಟ್‌
ಕಾಂಗ್ರೆಸ್‌ ಶಾಸಕರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರ: ಎಎನ್‌ಐ ಟ್ವೀಟ್‌   

ಬೆಂಗಳೂರು:ವಿಧಾನಸಭಾ ಸದನಲ್ಲಿ ವಿಶ್ವಾಸಮತ ಯಾಚನೆ ಮೇಲೆ ಗುರುವಾರ ಆರಂಭವಾದ ಚರ್ಚೆಯು ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಪರಸ್ಪರ ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲೇ ಅಂತ್ಯವಾಯಿತು. ಅಂತೂ ಇಂತೂ ಒಂದು ದಿನದ ಕಲಾಪದ ಕಾಲಹರಣ ಮಾಡುವಲ್ಲಿ ‘ಮೈತ್ರಿ’ಪಡೆ ಯಶಸ್ವಿಯಾಯಿತು.

ವಿಶ್ವಾಸಮತ ಯಾಚಿಸಿ, ಮತಕ್ಕೆ ಹಾಕದಿದ್ದುದನ್ನು ಖಂಡಿಸಿ, ಬಿಜೆಪಿ ಸದನದಲ್ಲೇ ಅಹೋರಾತ್ರಿ ಉಳಿಯಲು ನಿರ್ಧರಿಸಿತು. ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿಶ್ವಾಸಮತ ಯಾಚನೆಯ ಪ್ರಸ್ತಾಪವನ್ನು ಮುಖ್ಯಮಂತ್ರಿ ಮಂಡಿಸಿದರು. ಬಳಿಕ ಸ್ಪೀಕರ್‌ ಮಂಡನೆಗೆ ಅವಕಾಶ ನೀಡಿದರು. ಚರ್ಚೆ ಆರಂಭಿಸಿದ ಸಿಎಂ, ‘ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಭಾರೀ ಅವಸರದಲ್ಲಿದ್ದಾರೆ’ ಎಂದು ಕುಟುಕಿದರು.

ADVERTISEMENT

ಸಿಎಂ ಮಾತಿನ ಮಧ್ಯೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು, ‘ಕ್ರಿಯಾಲೋ‍ಪ’ ಮಂಡಿಸಿದರು. ಇದೇ ವಿಷಯದ ಮೇಲೆ ಮಧ್ಯಾಹ್ನದವರೆಗೆ ಚರ್ಚೆ ನಡೆಯಿತು. ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಇಲ್ಲ. ವಿಶ್ವಾಸಮತ ಯಾಚನೆ ಮೇಲೆ ಮಾತ್ರ ಚರ್ಚೆ ನಡೆಯಬೇಕು ಎಂದು ವಿಪಕ್ಷದವರ ತೀವ್ರ ವಿರೋಧದ ಮಧ್ಯೆಯೂ ಹಲವು ಶಾಸಕರು ಸಚಿವರು ತಮ್ಮ ಕಾನುನಿನ ಜ್ಞಾನ ಮತ್ತು ಮಾಹಿತಿಯನ್ನು ಸದನದ ಮುಂದಿಟ್ಟರು.

ಈ ನಡುವೆ ಸಚಿವ ಡಿ.ಕೆ.ಶಿವಕುಮಾರ್‌, ತಮ್ಮ ಶಾಸಕರೊಬ್ಬರನ್ನು ಅಪಹರಿಸಿ ಮುಂಬೈಗೆ ಕರೆದೊಯ್ದು, ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಹೇಗಿದೆ ನೋಡಿ ಈ ಚಿತ್ರ ಎಂದು ಪೋಟೊವೊಂದನ್ನು ತೊರಿಸುತ್ತಾ, ಸತ್ತವರಂತೆ ಮಲಗಿದ್ದಾರೆ ಎಂದು ದೂರಿದರು. ಜತೆಗೆ, ವಿಮಾನ ಟಿಕೆಟ್‌ಗಳನ್ನೂ ಪ್ರದರ್ಶಿಸಿದರು.

ಈ ನಡುವೆ ಸಭಾಧ್ಯಕ್ಷರಿಗೆ ರಾಜ್ಯಪಾಲರು ‘ಇಂದೇ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಮುಗಿಸಿ’ ಎಂಬ ಸಂದೇಶವನ್ನೂ ಕಳುಹಿಸಿದ್ದರು. ಇದನ್ನು ಸಭಾಧ್ಯಕ್ಷರು ಸದನದ ಗಮನಕ್ಕೆ ತಂದರು.

ಮಧ್ಯಾಹ್ನ ಕಲಾಪ ಆರಂಭವಾದಾಗ ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಸಭಾಧ್ಯಕ್ಷರು ಕಾರ್ಯನಿಮಿತ್ತ ಸದನದಿಂದ ಹೊರಕ್ಕೆ ಹೋದಾಗ ಉಪಾಧ್ಯಕ್ಷರು ಆಸನದಲ್ಲಿ ಕುಳಿದ್ದವೇಳೆ, ಆಡಳಿತರೂಢಾ ಜೆಡಿಎಸ್‌–ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಉಪಾಧ್ಯಕ್ಷರು ಎಷ್ಟೇ ಹೇಳಿದರು ಅವರ ಕೇಳುವ ಸ್ಥಿತಿಗೆ ಬರಲಿಲ್ಲ. ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಬಳಿಕ ಕಲಾಪ ಆರಂಭವಾದಗಲೂ ಪ್ರತಿಭಟನೆ ಮುಂದುವರಿಸಿದರು.

ಈ ನಡುವೆ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು, ‘ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಅಹೋರಾತ್ರಿ ಸದನದಲ್ಲೇ ಇರುತ್ತೇವೆ’ ಎಂದು ಪ್ರಕಟಿಸಿದರು.

ಸದನದಲ್ಲಿ ಗದ್ದಲ ಮುಂದುವರಿದಿದ್ದರಿಂದ ಉಪಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.