ADVERTISEMENT

ಮಹಾರಾಷ್ಟ್ರಕ್ಕೆ ಹಿಡಿಮಣ್ಣು ನೀಡೆವು: ಠಾಕ್ರೆಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:50 IST
Last Updated 22 ಜನವರಿ 2021, 18:50 IST

ಬೆಂಗಳೂರು: ‘ನಮ್ಮ ಪ್ರಾಣವನ್ನಾದರೂ ಕೊಟ್ಟು ರಾಜ್ಯದ ಗಡಿ ಉಳಿಸುತ್ತೇವೆ. ಆದರೆ, ಗಡಿನಾಡಿನ ಬೆಳಗಾವಿ, ಬೀದರ್, ಕಾರವಾರದ ಒಂದು ಹಿಡಿ ಮಣ್ಣನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ’ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್‌ ಬೈಂದೂರ್ ತಿಳಿಸಿದ್ದಾರೆ.

‘ರಾಜ್ಯದ ಗಡಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕರ್ನಾಟಕ ಆಕ್ರಮಿತ ಬೆಳಗಾವಿ ಎಂದೆಂದೂ ಮರಾಠರದ್ದು ಎಂಬ ಉದ್ಧಟತನದ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾರೆ. ಸಂಕಷ್ಟಗಳಲ್ಲೂ ಮರಾಠರ ಪರ ತುಟಿ ಬಿಚ್ಚದ ಉದ್ಧವ್‌ಗೆ, ಈಗ ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಬೆಳಗಾವಿ ಇಂದು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಆಗಿದೆ. ಮುಖ್ಯಮಂತ್ರಿ ಪಟ್ಟ ಗಟ್ಟಿಗೊಳಿಸಿಕೊಳ್ಳಲು ಮರಾಠ–ಕನ್ನಡಿಗರ ನಡುವೆ ಕಿಚ್ಚು ಹಚ್ಚಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಕನ್ನಡಿಗರ ಸಾಮರ್ಥ್ಯಕ್ಕೆ ಧಕ್ಕೆ ತರುವುದು, ರಾಜ್ಯದ ಮುಖ್ಯಮಂತ್ರಿಯ ಪ್ರತಿಕೃತಿ ದಹನ, ಕನ್ನಡ ಚಿತ್ರಮಂದಿರಕ್ಕೆ ಹಾನಿಯಂತಹ ನೀಚ ಕೃತ್ಯಗಳಿಗೆ ಕೈಹಾಕಿದರೆ ಕನ್ನಡಿಗರು ಹತ್ತಿಕ್ಕಲಿದ್ದಾರೆ. ಇದು ಭಾಷಾವಾರು ರಾಜಕೀಯ ಮಾಡುವವರಿಗೆ ಎಚ್ಚರಿಕೆ ಗಂಟೆ‘ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.