ADVERTISEMENT

ಮತಾಂತರ ನಿಷೇಧ ಮಸೂದೆ ಹಿಂತೆಗೆತ: ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 13:11 IST
Last Updated 24 ಡಿಸೆಂಬರ್ 2021, 13:11 IST
ವಿಧಾನ ಪರಿಷತ್‌
ವಿಧಾನ ಪರಿಷತ್‌   

ಬೆಳಗಾವಿ (ಸುವರ್ಣ ವಿಧಾನಸೌಧ): ವಿರೋಧ ಪಕ್ಷ ಕಾಂಗ್ರೆಸ್ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವುಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದ್ದು,ಮುಂದಿನ ಅಧಿವೇಶನದಲ್ಲಿ ಮಂಡಿಸಲುನಿರ್ಧರಿಸಿದೆ.

ಸಂಜೆಐದು ನಿಮಿಷಗಳ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಮಸೂದೆ ಮಂಡನೆ ಕೈಬಿಟ್ಟಿರುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು. ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಘೋಷಿಸಿದರು.

ಇದಕ್ಕೂ ಮುನ್ನ,ಮಧ್ಯಾಹ್ನದ ವಿರಾಮದ ಬಳಿಕ ಕಲಾಪ 3 ಗಂಟೆಗೆ ಮುಂದೂಡಲಾಗಿತ್ತು. 4 ಗಂಟೆಯಾದರೂ ಕೋರಂ ಬೆಲ್ ಹಾಕಿರಲಿಲ್ಲ.

ADVERTISEMENT

ಮತಾಂತರ ನಿಷೇಧ ಮಸೂದೆ ಅಂಗೀಕಾರಕ್ಕೆ ಬೆಂಬಲದ‌‌ ಕೊರತೆ ಇರುವುದರಿಂದ ವಿಧಾನ ಪರಿಷತ್ ಕಲಾ‌ಪ‌ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದುಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು ಬೆಳಗಾವಿಯಿಂದ ಹೊರಟು ಹೋಗಿದ್ದರು. ಹಾಗಾಗಿ, ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿತ್ತು.

ನೂರಾರು ಕಿಲೋಮೀಟರ್ ದೂರ ತಲುಪಿರುವ ಅವರಿಗಾಗಿ ಕಾದು ಕುಳಿತಿದ್ದರು. 3.45ರ ಸುಮಾರಿಗೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸೇರಿದ್ದರು.

ಅಷ್ಟರಲ್ಲಿ ಸಭಾಪತಿ ಕೊಠಡಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಕಲಾಪ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಯವರ ಕೊಠಡಿಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಅಷ್ಟರಲ್ಲಿ ಕೋರಂ ಬೆಲ್ ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.