ADVERTISEMENT

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತ್ತೊಂದು ಪಾದಯಾತ್ರೆ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 16:02 IST
Last Updated 4 ಸೆಪ್ಟೆಂಬರ್ 2024, 16:02 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. 

ಮುಡಾ’ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ವಿರೋಧಿ ಬಣ ಮೈಸೂರು ಚಲೋದತ್ತ ತಲೆ ಹಾಕಿರಲಿಲ್ಲ. ‘ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಯತ್ನಾಳ ವ್ಯಂಗ್ಯವಾಡಿದ್ದರು.

ಬಳಿಕ ಬೆಳಗಾವಿಯ ರೆಸಾರ್ಟ್‌ನಲ್ಲಿ ಬಿಜೆಪಿಯ ಅತೃಪ್ತ ನಾಯಕರು ಸಭೆ ನಡೆಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿಯ ವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದರು. 

ADVERTISEMENT

‘ಯತ್ನಾಳ ನೇತೃತ್ವದಲ್ಲಿ ಕೆಲವು ಶಾಸಕರು ಸೇರಿ ಉತ್ತರ ಕರ್ನಾಟಕದ ಭಾಗದಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಅವರು ವರಿಷ್ಠರ ಅನುಮತಿ ಪಡೆದುಕೊಂಡು ಮಾಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದರು. 

ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಜೋಶಿ, ‘ವಾಲ್ಮೀಕಿ ಹಗರಣ, ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ನಿಲ್ಲದು’ ಎಂದರು. 

‘ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಹೋರಾಟ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ’ ಎಂದು ಸ್ಪಷ್ಟಪಡಿಸಿದರು. 

‘ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ, ಎರಡನೇ ಪಾದಯಾತ್ರೆ ಎನ್ನಬೇಕಿಲ್ಲ. ಪಕ್ಷದೊಳಗೆ ಎಲ್ಲರೂ ಕೂಡಿಯೇ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಅವರು ತಿಳಿಸಿದರು. 

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರು ಸೇರಿದಂತೆ ನಾಯಕರೆಲ್ಲ ಸೇರಿ ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದಾರೆ. ರಾಜ್ಯದ ಎಲ್ಲ ನಾಯಕರ ಮುಂದಾಳುತನದಲ್ಲಿ ಈ ಪಾದಯಾತ್ರೆ ನಡೆಯಲಿದೆ’ ಎಂದು ಅವರು ಹೇಳಿದರು. 

‘ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಅಕ್ರಮ ಎಸಗಿದ್ದರೆ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ 8 ವರ್ಷ ಏನು ಕತ್ತೆ ಕಾಯುತ್ತಿತ್ತಾ?’ ಎಂದು ಅವರು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.