
ಬೆಂಗಳೂರು: ಮಾಸ್ಟರ್ ಪ್ಲಾನ್ ಹೊರತಾದ, ಪರಿಭಾವಿತ (ಡೀಮ್ಡ್) ಭೂ ಪರಿವರ್ತನೆಗೂ 30 ದಿನಗಳ ಗಡುವು ನಿಗದಿ ಮಾಡಲಾಗಿದ್ದು, ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ-1964ಕ್ಕೆ ಕಳೆದ ಮೂರು ವರ್ಷಗಳಲ್ಲಿ ತರಲಾದ ತಿದ್ದುಪಡಿಗಳ ಅನ್ವಯ ಹೊಸ ನಿಯಮಗಳನ್ನು ರಚಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹೊಸ ನಿಯಮಗಳ ಪ್ರಕಾರ, ಕೃಷಿ ಭೂಮಿ ಖರೀದಿ ಸರಳೀಕರಣ ಮತ್ತು ಕೆಲವು ಉದ್ದೇಶಗಳಿಗೆ ಭೂಮಿ ಪರಿವರ್ತನೆ ನಿಯಮ ಸಡಿಲಿಸಲಾಗಿದೆ. ಭೂ ಪರಿವರ್ತನೆಗೆ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು 30 ದಿನಗಳ ಒಳಗಾಗಿ ಅನುಮತಿ ನೀಡಬೇಕು. ದಾಖಲೆಗಳು ಸರಿ ಇಲ್ಲದಿದ್ದರೆ ಸಕಾರಣ ನೀಡಿ, ಅರ್ಜಿಗಳನ್ನು ತಿರಸ್ಕರಿಸಬಹುದು. ನಿಗದಿತ ಅವಧಿಯ ಒಳಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳದಿದ್ದರೆ ಸ್ವಯಂ ಚಾಲಿತವಾಗಿ ಭೂ ಪರಿವರ್ತನೆಯಾ ಗುತ್ತದೆ. ಮಾಸ್ಟರ್ ಪ್ಲಾನ್ ಇರುವ ಜಮೀನುಗಳಿಗೂ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದ್ದು, ಅಂಥವರು ನೇರವಾಗಿ ಯೋಜನಾ ಅನುಮೋದನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ನವೀಕರಿಸಬಹುದಾದ ಇಂಧನದ ಯೋಜನಾ ಘಟಕ ಸ್ಥಾಪನೆಗೆ ಭೂ ಪರಿವರ್ತನೆಯಿಂದ ವಿನಾಯಿತಿ ಪಡೆಯಬೇಕಾದರೆ ಇಂಧನ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಆಶಯದಿಂದ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂಪರಿವರ್ತನೆ ಇಲ್ಲದೇ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಕಂದಾಯ ನ್ಯಾಯಾಲಯಗಳನ್ನು ನಡೆಸುವ ಕುರಿತು ಸ್ಪಷ್ಟ ನಿಯಮ ರೂಪಿಸಲಾಗಿದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶಗಳನ್ನು ಹೊರಡಿಸದಂತೆ, ಕಾನೂನು ಮೀರಿ ಆದೇಶಗಳನ್ನು ನೀಡದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೊಸ ಸುಧಾರಣೆಗಳಿಂದಾಗಿ ಸಾರ್ವಜನಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವುದು ತಪ್ಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.