ADVERTISEMENT

ಕೋವಿಡ್–19 | ಮಹಾಮಾರಿ ಎದುರಿಸಲು ಸಕಲ ಸಿದ್ಧತೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 15:28 IST
Last Updated 10 ಏಪ್ರಿಲ್ 2020, 15:28 IST
   

ಬೆಂಗಳೂರು: ‘ಒಂದು ವೇಳೆ ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ10 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಾದರೂ ಅಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕೊರೊನಾವೈರಸ್ ಸೋಂಕು ಹಿನ್ನೆಲೆಯಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಈ ಕುರಿತಂತೆಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ‘ಅಂಕಿ-ಅಂಶ ಗಮನಿಸಿದರೆ, ಗಣನೀಯ ಕೊರತೆ ಕಂಡು ಬರುತ್ತಿದೆ’ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಸೌಕರ್ಯಗಳ ಸಮ ಪ್ರಮಾಣದ ಹಂಚಿಕೆ ಮತ್ತು ಲಭ್ಯತೆಯನ್ನು ಖಾತರಿ ಪಡಿಸಬೇಕು’ಎಂದು ಸರ್ಕಾರಕ್ಕೆ ಸೂಚಿಸಿದೆ.

ಸರ್ಕಾರ ಹೇಳಿರುವ ಮುಖ್ಯಾಂಶಗಳು
* ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಎನ್-95 ಮಾಸ್ಕ್, ಮೂರು ಪದರದ ಮಾಸ್ಕ್, ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್‌ಗಳು ಇವೆ.

* ಆಪತ್ಕಾಲೀನ ಯೋಜನೆ ಅಂದಾಜಿನ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಪ್ರಕರಣಗಳು 10 ಸಾವಿರ ಮುಟ್ಟಿದರೂ ಸಂಭವನೀಯ ಪರಿಸ್ಥಿತಿ ಎದುರಿಸಲು ಅಗತ್ಯ ವಸ್ತುಗಳ ಪೂರೈಕೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

* ವೇಗವಾಗಿ ಸೋಂಕು ಹರಡಿದ ಇಟಲಿ ನಗರದ ಪ್ರಮಾಣವೊಂದನ್ನು ಆಧರಿಸಿ ಕರ್ನಾಟಕದಲ್ಲಿ ಸಂಭವನೀಯ ಪ್ರಕರಣಗಳ ಒತ್ತಡವನ್ನು ಅಂದಾಜಿಸಲಾಗಿದೆ.

* ಇಟಲಿ, ಸ್ಪೇನ್, ಇರಾನ್ ಹಾಗೂ ಚೀನಾ ದೇಶಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣವನ್ನು ನಿಷ್ಕರ್ಷೆಗೆ ಒಳಪಡಿಸಿ ಆಪತ್ಕಾಲೀನ ಯೋಜನೆ ಸಿದ್ಧಪಡಿಸಲಾಗಿದೆ.

* ಸೋಂಕು ತಪಾಸಣೆಗೆ ರಾಜ್ಯದಾದ್ಯಂತ 15 ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇವುಗಳಲ್ಲಿ 11 ಸರ್ಕಾರಿ ಹಾಗೂ 4 ಖಾಸಗಿ ಆಸ್ಪತ್ರೆಗಳಿವೆ.

* ಮುಂದಿನ ಎರಡು ವಾರಗಳಲ್ಲಿ ಹೆಚ್ಚುವರಿ 5 ಲ್ಯಾಬ್ ಸ್ಥಾಪಿಸಲಾಗುವುದು.

* ರಾಜ್ಯದಾದ್ಯಂತ ಕೋವಿಡ್-19 ತಪಾಸಣೆ ಹಾಗೂ ಚಿಕಿತ್ಸೆಗೆ ಎಷ್ಟು ಐಷೋಲೇಷನ್ ಬೆಡ್, ವೆಂಟಿಲೇಟರ್ ಹಾಗೂ ಇತರ ಉಪಕರಣಗಳು ಅವಶ್ಯಕತೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದಕ್ಕೆ ಅನುಗುಣವಾಗಿ ಖರೀದಿ ಮತ್ತು ತಯಾರಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

* ಈಗಾಗಲೇ 1,574 ವೆಂಟಿಲೇಟರ್ ಖರೀದಿಗೆ ಆದೇಶಿಸಲಾಗಿದೆ.

* ಆಪತ್ಕಾಲೀನ ಯೋಜನೆ ಅಂದಾಜಿನ ಪ್ರಕಾರ 18.33 ಲಕ್ಷ ಎನ್-95 ಮಾಸ್ಕ್ ಪೂರೈಕೆಗೆ ಆದೇಶ ನೀಡಲಾಗಿದೆ. ಈ ತನಕ 5,46,700 ಮಾಸ್ಕ್‌ಗಳನ್ನು ಸ್ವೀಕರಿಸಿಲಾಗಿದೆ.

* 10.05 ಲಕ್ಷ ಪಿಪಿಇಗಳ ಪೈಕಿ 1,82,600 ಸ್ವೀಕರಿಸಲಾಗಿದೆ. 49 ಲಕ್ಷ ಮೂರು ಪದರದ ಮಾಸ್ಕ್‌ಗಳ ಪೈಕಿ 37 ಲಕ್ಷ ಸ್ವೀಕರಿಸಲಾಗಿದೆ.

* ರಾಜ್ಯದಲ್ಲಿ ಕೋವಿಡ್-19ರ ಪರಿಸ್ಥಿತಿಗೂ ಮೊದಲು 11 ಫಾರ್ಮಾಸ್ಯೂಟಿಕಲ್ ಕಂಪನಿಗಳು ಸ್ಯಾನಿಟೈಸರ್ ಉತ್ಪಾದಿಸುತ್ತಿದ್ದವು. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಹೆಚ್ಚುವರಿಯಾಗಿ 77 ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ.

* ಇದರ ಪರಿಣಾಮ ಸ್ಯಾನಿಟೈಸರ್ ಉತ್ಪಾದನೆ ಪ್ರತಿ ದಿನಕ್ಕೆ 50 ಸಾವಿರ ಲೀಟರ್‌ಗೂ ಹೆಚ್ಚಾಗಲಿದೆ. ಈ ಕಂಪನಿಗಳು ರಾಜ್ಯದ ಬೇಡಿಕೆಗೆ ತಕ್ಕಂತೆ ಸ್ಯಾನಿಟೈಸರ್‌ಉತ್ಪಾದಿಸುತ್ತಿವೆ. ಅಂತೆಯೇ ಅನ್ಯ ರಾಜ್ಯಗಳಿಗೂ ಸರಬರಾಜು ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.