ADVERTISEMENT

ಪಠ್ಯಪುಸ್ತಕ ಪೂರೈಕೆಯಾದ ಬಳಿಕ ಪರಿಷ್ಕರಣೆಯ ಹಟವೇಕೆ: ಸಿಎಂಗೆ ಸುನಿಲ್ ಕುಮಾರ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2023, 7:59 IST
Last Updated 7 ಜೂನ್ 2023, 7:59 IST
ಸುನಿಲ್ ಕುಮಾರ್
ಸುನಿಲ್ ಕುಮಾರ್    

ಬೆಂಗಳೂರು: ಶಾಲೆಗಳಿಗೆ ಪಠ್ಯಪುಸ್ತಕಗಳು ಪೂರೈಕೆಯಾದ ನಂತರ ಪರಿಷ್ಕರಣೆಯ ಹಟವೇಕೆ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಪಠ್ಯಪುಸ್ತಕ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕ್ರತಿ ಹಾಗೂ ಇತಿಹಾಸದ ನೈಜ್ಯ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರ್ಕಾರದ ಉದ್ದೇಶವೇ?, ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಟವೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಇಲಾಖೆಯ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಾದರೂ ಅವಕಾಶ ಕೊಡಿ. ಅದನ್ನು ಬಿಟ್ಟು ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಯಾವುದೆಂದು ನಿರ್ಧರಿಸಿ ಎಂದು ನೀವು ಪಾಠ ಮಾಡಬೇಡಿ’ ಎಂದು ಸುನಿಲ್ ಕುಮಾರ್ ಗುಡುಗಿದ್ದಾರೆ.

ADVERTISEMENT

‘ನಾನು ಮೇಷ್ಟ್ರಾಗಿದ್ದೆ ಕಣ್ರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವುದಕ್ಕೆ ಮುನ್ನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆ ಮೊದಲು ಅರ್ಥಮಾಡಿಕೊಳ್ಳಿ. ಪಠ್ಯ ಪರಿಷ್ಕರಣೆ ಬಗ್ಗೆ ನಿಮಗಿರುವ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ’ ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ.

‘ಸಿದ್ದರಾಮಯ್ಯನವರೇ, ನಿಮಗೆ ಶ್ರೇಷ್ಠ ಭಾರತೀಯ ಚಿಂತನೆಗಳು, ನಿಜವಾದ ಆದರ್ಶ ಪುರುಷ ಯಾರಾಗಬೇಕು?, ತಾಯಿ ಭಾರತೀಯ ಅಮರಪುತ್ರರು ಎಂಬ ವಿಚಾರಗಳು ಹೇಗೆ ಇಷ್ಟವಾಗುತ್ತದೆ ಹೇಳಿ?, ನಿಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ, ವಿದೇಶಿ ದಾಳಿಯ ವಿಕೃತಿಗಳು ಮಾತ್ರ ತುಂಬಿರಬೇಕಲ್ಲವೇ’ ಎಂದು ಟೀಕಿಸಿದ್ದಾರೆ.

ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾಗಿ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ ಎಂದು ಸುನಿಲ್ ಕುಮಾರ್ ಕುಟುಕಿದ್ದಾರೆ.

ಇದನ್ನೂ ಓದಿ... ಬೊಮ್ಮಾಯಿ ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತತುದಿಗೆ ಏರಿದ್ದಾರೆ: ದಿನೇಶ್ ಗುಂಡೂರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.