ADVERTISEMENT

11,366 ನೌಕರರಿಗೆ ‘ಒಪಿಎಸ್‌’ ಭಾಗ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 20:12 IST
Last Updated 24 ಜನವರಿ 2024, 20:12 IST
<div class="paragraphs"><p>ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ಚಿತ್ರ</p></div>

ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ಚಿತ್ರ

   

ಬೆಂಗಳೂರು: 2006 ಏ.4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ನೇಮಕಾತಿ ಆದೇಶ ಪಡೆದಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್‌) ಸೇರಿಸಿ ಆದೇಶ ಹೊರಡಿಸಿದೆ.

ಹಾಗೆಯೇ ಏ.1, 2006ರ ಪೂರ್ವದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ, ನಂತರ ಇತರೆ ಇಲಾಖೆಯ ಬೇರೆ ಹುದ್ದೆಗಳಿಗೆ ಮರು ಆಯ್ಕೆಯಾದವರೂ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ.

ADVERTISEMENT

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೂ ಮೊದಲು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಒಪಿಎಸ್‌ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ 2023 ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದೇಶದಂತೆ ಕ್ರಮ ಕೈಗೊಳ್ಳಲು ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಕೇಂದ್ರದ ಆದೇಶದಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಎಎಸ್‌ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್‌ ವ್ಯಾಪ್ತಿಗೆ ತಂದಿತ್ತು. ಈಗ ಇತರೆ ನೌಕರರನ್ನೂ ಒಪಿಎಸ್‌ ಯೋಜನೆಗೆ ಒಳಪಡಿಸಿದೆ.  

ಹಳೇ ಪಿಂಚಣಿ ಯೋಜನೆಗೆ ಒಳಪಟ್ಟ ನೌಕರರು ಜೂನ್‌ 30ರ ಒಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮ ಅಭಿಪ್ರಾಯ ಸಲ್ಲಿಸಬೇಕು. ಎರಡು ಪಿಂಚಣಿ ಯೋಜನೆಯಲ್ಲಿ ತಾವು ಇಚ್ಚಿಸಿದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆಯ ಅಭಿಪ್ರಾಯ ಸಲ್ಲಿಸದವರು ಈಗ ಇರುವಂತೆ ಎನ್‌ಪಿಎಸ್‌ನಲ್ಲೇ ಮುಂದುವರಿಯುತ್ತಾರೆ. ಇಲಾಖಾ ಮುಖ್ಯಸ್ಥರು ಅರ್ಹ ನೌಕರರ ಪಟ್ಟಿಯನ್ನು ಆ.31ರ ಒಳಗೆ ಆರ್ಥಿಕ ಇಲಾಖೆಯ ಅನುಮೋದನೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 

‘ಆರ್ಥಿಕ ಇಲಾಖೆಯ ಆದೇಶದಿಂದ ಹಲವು ನೌಕರರಿಗೆ ಅನುಕೂಲವಾಗಿದೆ. ಚುನಾವಣೆಯ ಸಮಯದಲ್ಲಿ ಕೊಟ್ಟ ಭರವಸೆಯಂತೆ ಸರ್ಕಾರ ಎಲ್ಲ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸಂಪುರ್ಣ ರದ್ದು ಮಾಡಿ, ಎಲ್ಲ ಸರ್ಕಾರಿ ನೌಕರರನ್ನೂ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಕೋರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.