ADVERTISEMENT

₹4 ಸಾವಿರ ಕೋಟಿ ಹಿಂಬಾಕಿಗೆ ತಡೆ; ಸರ್ಕಾರಿ ನೌಕರರಿಗೆ ತಪ್ಪದ ಅಲೆದಾಟ

ಆರ್ಥಿಕ ಇಲಾಖೆ ಕ್ರಮ

ಚಂದ್ರಹಾಸ ಹಿರೇಮಳಲಿ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ಹಿಂದಿನ ಹಣಕಾಸು ವರ್ಷಗಳ ವೇತನ ಬಾಕಿ ನೀಡದಂತೆ ಎಲ್ಲ ಖಜಾನೆಗಳಿಗೂ ಆರ್ಥಿಕ ಇಲಾಖೆ ಲಿಖಿತ ಸೂಚನೆ ನೀಡಿದ್ದು, ಮಾರ್ಚ್‌ ಅಂತ್ಯದ ಒಳಗೆ ಹಣ ಪಡೆಯಲು ಅಲೆದಾಡುತ್ತಿದ್ದ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ. 

ರಾಜ್ಯವಲಯ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಿಎಫ್‌ಎಂಎಸ್‌, ಎನ್‌ಟಿಟಿ ಸೇರಿದಂತೆ ಎಲ್ಲ ವಲಯಗಳ ನೌಕರರ 2024–25ನೇ ಸಾಲಿನ ವೇತನ ಬಾಕಿಯನ್ನಷ್ಟೇ ನೀಡಬೇಕು. ಪ್ರಸಕ್ತ ಹಣಕಾಸು ವರ್ಷದ ಎಲ್ಲ ಬಾಕಿಗಳನ್ನೂ ಮಾರ್ಚ್‌ 25ರ ಒಳಗೆ ಇತ್ಯರ್ಥಪಡಿಸಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿದೆ. ಇದರಿಂದಾಗಿ ವೇತನ ಹಿಂಬಾಕಿ ಬವಣೆ 2025–26ನೇ ಸಾಲಿನ ಹಣಕಾಸು ವರ್ಷಕ್ಕೂ ಮುಂದುವರಿಯಲಿದೆ.

ADVERTISEMENT

ವಿವಿಧ ಇಲಾಖೆಗಳು, ನಿಗಮ–ಮಂಡಳಿಗಳು ಸೇರಿದಂತೆ ನೌಕರರಿಗೆ ಬರಬೇಕಾದ ಆರೋಗ್ಯ ವೆಚ್ಚದ ಬಾಕಿ, ಪ್ರಯಾಣ ಭತ್ಯೆ, ವಾಹನ ಬಾಡಿಗೆ ಭತ್ಯೆ, ಕೆಲಸಕ್ಕೆ ಸೇರಿ 15, 20 ವರ್ಷಗಳಾದರೂ ಬಡ್ತಿ ಸಿಗದಿದ್ದಾಗ, ನೀಡುವ ಕಾಲಮಿತಿ ವೇತನ ಬಡ್ತಿ ಸೇರಿದಂತೆ 2023–24ನೇ ಹಣಕಾಸು ವರ್ಷ ಹಾಗೂ
ಅದಕ್ಕೂ ಹಿಂದಿನಿಂದ ಇರುವ ಎಲ್ಲ ವೇತನ ಬಾಕಿ ತಡೆಹಿಡಿಯಲಾಗಿದೆ. ಈ ಮೊತ್ತ ಸುಮಾರು ₹4,000 ಕೋಟಿಗೂ ಹೆಚ್ಚಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. 

₹500 ಕೋಟಿ ವೈದ್ಯಕೀಯ ಬಾಕಿ:

ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ನೌಕರರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಚಿಕಿತ್ಸೆ ಪಡೆದ ನಂತರ ಆ ಮೊತ್ತದ ಮರುಪಾವತಿಗಾಗಿ
ತಮ್ಮ ಇಲಾಖೆಗಳ ಮೂಲಕ ಚಿಕಿತ್ಸಾ ವೆಚ್ಚದ ಬಿಲ್‌ ಸಲ್ಲಿಸುತ್ತಾರೆ. ಹೀಗೆ ಸಲ್ಲಿಕೆಯಾದ ಹಿಂದಿನ ವರ್ಷಗಳ
ಬಾಕಿ ಮೊತ್ತ ₹500 ಕೋಟಿಗೂ ಅಧಿಕವಿದೆ. ಶಾಲಾ ಶಿಕ್ಷಣ ಇಲಾಖೆಯೊಂದರಲ್ಲೇ ಈ ಮೊತ್ತ ₹120 ಕೋಟಿಯಷ್ಟಿದೆ.

ಪ್ರಕ್ರಿಯೆಯ ವಿಳಂಬ, ನೌಕರರಿಗೆ ಸಂಕಷ್ಟ: ವೇತನ ಬಾಕಿ ಪಡೆಯಲು ನೌಕರರು ಸಮಯಕ್ಕೆ ಸರಿಯಾಗಿ ತಮ್ಮ ಇಲಾಖೆಯ ವೇತನ ಬಟವಾಡೆ ಅಧಿಕಾರಿಗಳಿಗೆ ಸಲ್ಲಿಸಿದ್ದರೂ ಕೆಳ ಹಂತದಿಂದ ಇಲಾಖಾ ಮುಖ್ಯಸ್ಥರವರೆಗೆ ಕಡತ ಸಾಗಿ ಅನುಮೋದನೆಗೊಂಡು ಮರಳಲು, ನಂತರ ಖಜಾನೆಗೆ ಕಳುಹಿಸಲು ವರ್ಷ, ಎರಡು ವರ್ಷಗಳನ್ನು ತೆಗೆದುಕೊಳ್ಳಲಾಗುತ್ತಿದೆ.

‘ಮಂಜೂರಾದ ಹೃದಯದ ಶಸ್ತ್ರಚಿಕಿತ್ಸಾ ವೆಚ್ಚದ ಹಣ ಪಡೆಯಲು ಸಲ್ಲಿಸಿದ ಕಡತ ಎಫ್‌ಡಿಎ, ಕಚೇರಿ ಅಧೀಕ್ಷಕರು, ಮುಖ್ಯಸ್ಥರ ಮೂಲಕ ಸಾಗಿ ಕೇಂದ್ರ ಕಚೇರಿ ತಲುಪಿ, ಅನುಮೋದನೆ ಪಡೆಯಲು ಒಂದೂವರೆ ವರ್ಷ ಆಯಿತು. ಪ್ರಸಕ್ತ ಹಣಕಾಸು ವರ್ಷದ ಮೇನಲ್ಲೇ ಖಜಾನೆಗೆ ಕಳಹಿಸಿದ್ದರೂ ಹಣ ಸಿಗಲಿಲ್ಲ. ಈಗ ಆರ್ಥಿಕ ಇಲಾಖೆ ಅನುಮತಿ ಇಲ್ಲ ಎಂದು ವಾಪಸು ಕಳುಹಿಸಿದ್ದಾರೆ’ ಎಂದು ಶಿಕ್ಷಕಿ ಲತಾ ಆರೋಗ್ಯ ವೆಚ್ಚದ ಬಾಕಿ ಪಡೆಯಲು ನಡೆಸಿದ ಅಲೆದಾಟ ವಿವರಿಸಿದರು.

ಕಾಲಮಿತಿಯ ವೇತನ ಬಡ್ತಿ ಪಡೆಯಲೂ ಹಾಗೂ ಮಂಜೂರಾದ ನಂತರ ಹಿಂದಿನ ವರ್ಷಗಳ ಬಾಕಿಗಾಗಿ ಸಾವಿರಾರು ನೌಕರರು ಅಲೆದಾಡುತ್ತಲೇ ಇದ್ದಾರೆ.

ಹಿಂಬಾಕಿಗೆ ಏಕೆ ಕತ್ತರಿ?

ಖಜಾನೆ–2 ಜಾರಿಗೆ ಬಂದ ನಂತರ ನೌಕರರಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಅನುದಾನವನ್ನು ಇಲಾಖಾವಾರು ಪರಿಗಣಿಸಲಾಗುತ್ತದೆ. ಇಲಾಖೆಗೆ ನಿಗದಿಯಾದ ಅನುದಾನವನ್ನಷ್ಟೆ ಆ ಇಲಾಖೆಯ ನೌಕರರು ಪಡೆಯಬೇಕಿದೆ. ಇಲಾಖೆಯ ಯಾವ ಕಚೇರಿಯ ಸಿಬ್ಬಂದಿ ಮೊದಲು ವೇತನದ ಪಟ್ಟಿ ಸಿದ್ಧಪಡಿಸಿ, ಖಜಾನೆಗೆ ಸಲ್ಲಿಸುತ್ತಾರೋ ಅವರಿಗೆ ವೇತನವಾಗುತ್ತದೆ. ವಿಳಂಬ ಮಾಡಿದರೆ ಆ ತಿಂಗಳ ವೇತನ ಸಿಗುವುದಿಲ್ಲ.

ಒಂದು ಕಚೇರಿಯ ಸಿಬ್ಬಂದಿ ವೇತನ ಮೊತ್ತ ₹10 ಲಕ್ಷವಿದ್ದರೆ, ಅಲ್ಲಿನ ಕೆಲ ನೌಕರರು ₹1 ಲಕ್ಷ ಹಿಂಬಾಕಿ ವೇತನವನ್ನು ಹೆಚ್ಚುವರಿ ಪಡೆದರೂ ಅನುದಾನದಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ, ಅದೇ ಇಲಾಖೆಯ ಕೆಲ ಸಿಬ್ಬಂದಿಗೆ ಎಲ್ಲ ತಿಂಗಳು ಸರಿಯಾಗಿ ವೇತನ ದೊರೆಯುವುದಿಲ್ಲ. ಅವರು ಮುಂದಿನ ಅನುದಾನ ಬಿಡುಗಡೆವರೆಗೂ ಕಾಯಬೇಕು

ಎಲ್ಲ ಇಲಾಖೆಗಳಲ್ಲೂ ಇದ್ದ ಈ ಹಿಂಬಾಕಿ ಸಮಸ್ಯೆಗೆ ಅಲ್ಲಿನ ಬಡಾವಡೆ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರ ವಿಳಂಬ ಕಾರಣ ಎಂದು ಗುರುತಿಸಿದ ಆರ್ಥಿಕ ಇಲಾಖೆ, ವೇತನ ಹಿಂಬಾಕಿಯನ್ನು ಅದೇ ಹಣಕಾಸು ವರ್ಷದಲ್ಲಿಯೇ ಪಡೆಯುವುದನ್ನು ಕಡ್ಡಾಯಗೊಳಿಸಿದೆ. 

ವಿಳಂಬ ಪ್ರಕ್ರಿಯೆಯಿಂದ ನೌಕರರ ವೇತನಕ್ಕೆ ನಿಗದಿಪಡಿಸಿದ ಹಣ ಪ್ರತಿ ವರ್ಷವೂ ಉಳಿಯುತ್ತದೆ. ಇಲಾಖಾ ಮುಖ್ಯಸ್ಥರು ಖಚಿತ ವಿವರಣೆ ನೀಡಿದರಷ್ಟೇ ಹಿಂಬಾಕಿಗೆ ಅನುಮತಿ ನೀಡಲಾಗುತ್ತದೆ
ಪಿ.ಸಿ.ಜಾಫರ್‌, ಆರ್ಥಿಕ ಇಲಾಖೆ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.