ಕಬ್ಬು
ಬೆಂಗಳೂರು: ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಜೂನ್ 22ರಿಂದ ಕಬ್ಬು ಅರೆಯುವಿಕೆ ಆರಂಭಿಸಲಾಗುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ನ.1ರಿಂದ ಆರಂಭಿಸಲು ಮಂಗಳವಾರ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆ ನಿರ್ಧರಿಸಿತು.
ಕಬ್ಬು, ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರಕ್ಕೆ ಬರಲಾಯಿತು.
ಕಳೆದ ಮೂರು ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಮೊತ್ತ ಪಾವತಿಯಾಗಿದೆ. ಕಬ್ಬು ಪೂರೈಕೆ ಮಾಡಿದ 14 ದಿನಗಳ ಒಳಗೆ ಬಾಕಿ ಪಾವತಿ ಮಾಡಬೇಕು ಎಂಬ ನಿಯಮ ಬಹುತೇಕ ಪಾಲನೆಯಾಗಿದೆ. ಕೆಲ ಕಾರ್ಖಾನೆಗಳು ವಿಳಂಬ ಮಾಡಿದರೂ, ಬಾಕಿ ಉಳಿಸಿಕೊಂಡಿಲ್ಲ. ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿ ₹594 ಕೋಟಿ, ಮಹಾರಾಷ್ಟ್ರ ರಾಜ್ಯದಲ್ಲಿ ₹123 ಕೋಟಿ ಬಾಕಿ ಉಳಿಸಿಕೊಂಡಿವೆ. ಕಬ್ಬಿನ ಬಾಕಿ ಪಾವತಿ ವಿಚಾರದಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದುಶಿವಾನಂದ ಪಾಟೀಲ ಹೇಳಿದರು.
2025-26ನೇ ಸಾಲಿನ ಹಂಗಾಮಿಗೆ ಎಫ್‌ಆರ್‌ಪಿ ದರವನ್ನು ಪ್ರತಿ ಟನ್‌ಗೆ ₹4,440 ಅಥವಾ ₹4,200 (ಶೇ 9.5ಕ್ಕೆ) ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಳೆದ ಜನವರಿಯಲ್ಲೇ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೇಂದ್ರ ಸರ್ಕಾರ ಶೇ 10.25 ಸಕ್ಕರೆ ಇಳುವರಿಗೆ ಪ್ರತಿಟನ್‌ಗೆ ₹3,550, ಶೇ 10.25ಕ್ಕೂ ಮೇಲ್ಪಟ್ಟ ಇಳುವರಿಗೆ ಪ್ರತಿ ಟನ್‌ಗೆ ₹346 ಹೆಚ್ಚುವರಿ ಬೆಲೆ ನಿಗದಿಪಡಿಸಿದೆ ಎಂದರು.
ಕೆಲ ಕಾರ್ಖಾನೆಗಳು ಎಫ್‌ಆರ್‌ಪಿ ದರದಂತೆ ಸಂಪೂರ್ಣ ಹಣ ಪಾವತಿ ಮಾಡಿದ್ದರೂ ಕಬ್ಬು (ನಿಯಂತ್ರಣ) ಆದೇಶದ ಅನ್ವಯ ವಿಳಂಬದ ಅವಧಿಗೆ ರೈತರಿಗೆ ಶೇ 15 ಬಡ್ಡಿ ವಿತರಿಸಿರುವ ಬಗ್ಗೆ ಮಾಹಿತಿ ನೀಡಿಲ್ಲ. ಕಾರ್ಖಾನೆಗಳಿಂದ ಬರಬೇಕಾದ ಬಾಕಿ, ಬಡ್ಡಿ ಮೊತ್ತ ಪಾವತಿ ಬಗ್ಗೆ ಖಚಿತಪಡಿಸಿಕೊಳ್ಳಲು ಹಾಗೂ ಅನುಪಾಲನಾ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೋರ್ಟ್ ಆದೇಶವಿದ್ದರೂ ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಂಡಿಲ್ಲ. ಕೆಲವೆಡೆ ಡಿಜಿಟಲ್ ಯಂತ್ರಗಳನ್ನು ಅಳವಡಿಸಿದ್ದರೂ ರೈತರಲ್ಲಿ ವಿಶ್ವಾಸ ಬಂದಿಲ್ಲ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.