ADVERTISEMENT

ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು, 1 ಲಕ್ಷ ದಂಡ: ಹೊಸ ಮಸೂದೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 16:07 IST
Last Updated 4 ಡಿಸೆಂಬರ್ 2025, 16:07 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಉದ್ದೇಶಕ್ಕಾಗಿ ಕಾಯ್ದೆಯನ್ನು ಜಾರಿಗೊಳಿಸಲಿದೆ.

ದ್ವೇಷ ಭಾಷಣ, ಪ್ರಚೋದನಕಾರಿ ಮಾತುಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದನ್ನು ಗಮನಿಸಿರುವ ಸರ್ಕಾರ, ಇಂತಹ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ದ್ವೇಷಾಪರಾಧ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ. 

ADVERTISEMENT

ಈ ಉದ್ದೇಶಕ್ಕಾಗಿ ಸರ್ಕಾರ ರೂಪಿಸಿರುವ, ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ– 2025’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 

‘ಈ ಮಸೂದೆಯೂ ಸೇರಿ ಒಟ್ಟು ಎಂಟು ಮಸೂದೆಗಳ ಕರಡುಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಎಲ್ಲ ಮಸೂದೆಗಳನ್ನು ಬೆಳಗಾವಿಯಲ್ಲಿ ಡಿ. 8ರಿಂದ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಸಚಿವ ಎಚ್‌.ಕೆ. ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ ಮಾಡುವುದರಿಂದ ಸಮಾಜದ ಸಾಮರಸ್ಯ ಹದಗೆಡಿಸುವುದು ಮತ್ತು ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂತಹ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ ರೂಪಿಸಲಾಗಿದೆ’ ಎಂದು ಅವರು ವಿವರಿಸಿದರು.

ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವೈಕಲ್ಯ ಅಥವಾ ಬುಡಕಟ್ಟು ಜನರ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದು ಅಥವಾ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದನ್ನು ದ್ವೇಷಾಪರಾಧ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿ ಇಂತಹ ಕೃತ್ಯದಲ್ಲಿ ಭಾಗಿಯಾದರೆ ಏಳುವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಇದೇ ಅಪರಾಧವನ್ನು ಪುನರಾವರ್ತಿಸಿದರೆ ಎರಡು ವರ್ಷದಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಮತ್ತು ₹ 1 ಲಕ್ಷ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.

ದ್ವೇಷಾಪರಾಧದಿಂದ ಆಗಿರುವ ಹಾನಿಯ ತೀವ್ರತೆ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯಾಲಯವು ಸೂಕ್ತ ಪರಿಹಾರ ಘೋಷಿಸಬಹುದು. ಇಂತಹ ಕೃತ್ಯವೂ ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲ್ಪಡಲಿದೆ. ಇವುಗಳನ್ನು ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಯಾವುದೆಲ್ಲ ದ್ವೇಷಾಪರಾಧ?

  • ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ

  • ‌ಸಾಮರಸ್ಯ, ವ್ಯಕ್ತಿತ್ವ, ಸಮಾಜಕ್ಕೆ ಧಕ್ಕೆ ತರುವ ದತ್ತಾಂಶ ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ ಸಂಕೇತಗಳು

  • ಕಂಪ್ಯೂಟರ್‌ ಪ್ರೋಗ್ರಾಂಗಳು, ಸಾಫ್ಟ್‌ವೇರ್ ಮತ್ತು ಡಾಟಾಬೇಸ್‌ಗಳು ಅಥವಾ ಮೈಕ್ರೋಫೀಲ್ಮ್‌ ಅಥವಾ ಕಂಪ್ಯೂಟರ್‌ ರಚಿತ ಮೈಕ್ರೊಫೀಚರ್‌ಗಳು

  • ಈ ಮೇಲಿನ ಅಪರಾಧಗಳ ಮೇಲೆ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬಹುದು

ಟಿಇಟಿ ವಿನಾಯಿತಿ: ಶಿಕ್ಷಕರಿಗೆ ನಿರಾಳ
ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು ಆಯಾ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದರೆ ಸಾಕು ಆರು ಮತ್ತು ಏಳನೇ ತರಗತಿಗೆ ಬೋಧನೆ ಮಾಡಬಹುದು. ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪ್ರಮಾಣಪತ್ರ ಹೊಂದಿರಬೇಕೆಂಬ ಷರತ್ತನ್ನು ಕೈಬಿಟ್ಟು 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಅನುವಾಗುವಂತೆ ತಿದ್ದುಪಡಿ ಮಾಡಿ ಇದೇ ಅ. 16ರಂದು ಹೊರಡಿಸಿದ್ದ ವೃಂದ ಮತ್ತು ನೇಮಕಾತಿ (ತಿದ್ದುಪಡಿ) ಕರಡು ನಿಯಮಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
1,777 ಎಕರೆ ಭೂಮಿ ಕೈಬಿಡಲು ಒಪ್ಪಿಗೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಭೂಸ್ವಾಧೀನ ಮಾಡಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಅದನ್ನು ವಿರೋಧಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತ್ತು. 1339 ದಿನ ನಡೆದ ಹೋರಾಟದ ಬಳಿಕ ಭೂ ಸ್ವಾಧೀನ ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.