
ಸತೀಶ್ ಸೈಲ್
ಬೆಂಗಳೂರು: ‘ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಯಾವ ದಿನ ಎಷ್ಟು ಹೊತ್ತಿಗೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂಬ ಬಗ್ಗೆ ಉಭಯತ್ರರೂ ಕುಳಿತು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬನ್ನಿ’ ಎಂದು ಹೈಕೋರ್ಟ್, ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಶಾಸಕ ಸತೀಶ್ ಸೈಲ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನಿರ್ದೇಶಿಸಿದೆ.
ಈ ಸಂಬಂಧ ಸತೀಶ್ ಸೈಲ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್, ‘ಸತೀಶ್ ಸೈಲ್ ಅವರನ್ನು ಇದೇ 19ರ ಮಧ್ಯಾಹ್ನ 12.30 ಅಥವಾ 20ರ ಬೆಳಿಗ್ಗೆ 8.30ಕ್ಕೆ ಏಮ್ಸ್ ನಿಯಂತ್ರಣ ಕೊಠಡಿಗೆ ಕರೆತನ್ನಿ ಎಂದು ಏಮ್ಸ್‌ನ ಮೇಲ್ವಿಚಾರಕರು, ಬೆಂಗಳೂರಿನ ಇ.ಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ನಡೆಸಿರುವ ವೈದ್ಯಕೀಯ ದಾಖಲೆಗಳನ್ನೂ ತರಬೇಕು ಎಂದು ಸೂಚಿಸಿದ್ದಾರೆ’ ಎಂದರು.
ಇದಕ್ಕೆ ಸತೀಶ್ ಸೈಲ್ ಪರ ವಕೀಲರು, ‘ಸದ್ಯ ದೆಹಲಿಯಲ್ಲಿ ವಾಯು ಗುಣಮಟ್ಟ ಸರಿಯಿಲ್ಲ. ಇದರಿಂದ ವಿಮಾನಗಳ ಹಾರಾಟ ಏರುಪೇರಾಗುತ್ತಿದೆ. ಹಾಗಾಗಿ, ವೈದ್ಯಕೀಯ ತಪಾಸಣೆಗೆ ಒಳಗಾಗಲು ಒಂದಿಷ್ಟು ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ನ್ಯಾಯಪೀಠವು, ‘ಈ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಸತೀಶ್ ಸೈಲ್ ಒಟ್ಟಾಗಿ ಕುಳಿತು ವೈದ್ಯರ ಅನುಕೂಲ ನೋಡಿಕೊಂಡು ತೀರ್ಮಾನ ಕೈಗೊಳ್ಳಬಹುದು’ ಎಂದು ಸೂಚಿಸಿ ವಿಚಾರಣೆಯನ್ನು 2026ರ ಜನವರಿ 31ಕ್ಕೆ ಮುಂದೂಡಿತು.
‘ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ ದಾಖಲಿಸಿರುವ ಇಸಿಐಆರ್‌ಗೆ (ಜಾರಿ ನಿರ್ದೇಶನಾಲಯ ಪ್ರಕರಣದ ಮಾಹಿತಿ ವರದಿ) ಸಂಬಂಧಿಸಿದಂತೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ರದ್ದುಪಡಿಸಿದೆ ಹಾಗೂ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಿದೆ. ನಾನು ಜಠರ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಿಯಮಿತ (ರೆಗ್ಯುಲರ್) ಜಾಮೀನು ನೀಡಬೇಕು’ ಎಂದು ಸೈಲ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.