ಹೈಕೋರ್ಟ್
ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ನಡೆಸಿದ್ದ ಪ್ರಕರಣದ ಆರೋಪಿಗಳು, ಹಲವು ಪ್ರತ್ಯೇಕ ಪ್ರಕರಣಗಳಲ್ಲಿನ ಕೇಂದ್ರ– ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಕನ್ನಡಪರ ಹೋರಾಟಗಾರರು, ರೈತ ಸಂಘದ ನಾಯಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 2008ರಿಂದ 2023ರ ನಡುವೆ ದಾಖಲಾಗಿದ್ದ ಒಟ್ಟು 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣಗಳನ್ನು ಹಿಂಪಡೆಯುವ ದಿಸೆಯಲ್ಲಿ ರಾಜ್ಯ ಸರ್ಕಾರ 2024ರ ಅಕ್ಟೋಬರ್ 10ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ್ದ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ, ‘ನ್ಯಾಯಾಲಯ ದಲ್ಲಿ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಬೇಕಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 321ರ ಅನ್ವಯ ಆಯಾ ನ್ಯಾಯಾಲಯಗಳ ಪ್ರಾಸಿಕ್ಯೂಟರ್ ಒಪ್ಪಿಗೆ ಪಡೆಯಬೇಕು.
ಆದರೆ, ಸರ್ಕಾರ ಈ ಪ್ರಕರಣದಲ್ಲಿ ಇದನ್ನು ಪಾಲನೆ ಮಾಡಿಲ್ಲ. ಅಂತೆಯೇ, ಸಿಆರ್‌ಪಿಸಿ ಅಡಿಯಲ್ಲಿ ಆದೇಶ ಹೊರಡಿಸುವಾಗ ಅದಾಗಲೇ ಈ ಕಾಯ್ದೆ ರದ್ದುಗೊಂಡಿತ್ತು’ ಎಂಬ ಪ್ರತಿಪಾದನೆಯನ್ನು ನ್ಯಾಯಪೀಠ ಮಾನ್ಯ ಮಾಡಿದೆ.
‘ಪ್ರಕರಣಗಳನ್ನು ಹಿಂಪಡೆಯಲು ಅಂಜುಮಾನ್ ಇ-ಇಸ್ಲಾಂ ಸಂಘಟನೆ ಮತ್ತು ಉಪ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಈ ಮನವಿಗಳನ್ನು ಆಧರಿಸಿ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದ ಸಂಪುಟ ಸಭೆಯಲ್ಲಿ ಒಟ್ಟು 43 ಪ್ರಕರಣಗಳನ್ನು ಹಿಂಪಡೆಯಲು ನಿರ್ಧಾರಿಸಲಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದ್ದರಿಂದ, ಇದು ರಾಜಕೀಯವಾಗಿ ತೆಗೆದುಕೊಂಡ ನಿರ್ಧಾರ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
‘ಸಿಆರ್‌ಪಿಸಿ ಕಲಂ 321ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಹಿಂತೆಗೆದುಕೊಳ್ಳುವುದು ಕೇವಲ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಚನೆಗೆ ಅನುಗುಣವಾಗಿ ಅಲ್ಲ. ಬದಲಿಗೆ, ಅಪರಾಧದ ಗಂಭೀರತೆ, ಪ್ರಕರಣದ ಸಂಗತಿಗಳನ್ನೂ ಆಧರಿಸಿ ಮುಂದಡಿ ಇಡಬೇಕಾಗುತ್ತದೆ. ಸರ್ಕಾರ ಇಂತಹ ವಿಚಾರದಲ್ಲಿ ಕಟ್ಟಪ್ಪಣೆ ಹೊರಡಿಸಲು ಸಾಧ್ಯವಿಲ್ಲ. ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರಾಸಿಕ್ಯೂಟರ್ ಸ್ವಾತಂತ್ರ್ಯ ಮತ್ತು ಅವರ ವಿವೇಚನಾಯುಕ್ತ ನಿರ್ಧಾರಗಳ ಮೇಲೆ ಒತ್ತಡ ಹೇರಲು ಆಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ರಾಜಕೀಯ ಅಂಶಗಳ ಆಧಾರದಲ್ಲಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಅಧಿಕಾರ ದುರುಪಯೋಗದ ಅತ್ಯಂತ ಕೆಟ್ಟ ಸ್ವರೂಪ ಮತ್ತು ಅದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ನಡೆ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಪ್ರಕರಣವನ್ನು ಹಿಂಪಡೆಯುವುದು ಪ್ರಾಸಿಕ್ಯೂಟರ್ ಮತ್ತು ಆಯಾ ನ್ಯಾಯಾಲಯದ ವಿವೇಚನೆಯ ವಿಷಯ. ಇದನ್ನು ಮೀರಿದರೆ ಅದು ಈ ನೆಲದ ಕಾನೂನಿನ ಉಲ್ಲಂಘನೆಯಾದಂತೆ’ ಎಂದು ಹೇಳಿದೆ.
‘ಕೋಮು ಪ್ರಚೋದನೆ ಉಂಟು ಮಾಡುವ ಛಾಯಾಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ’ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ನೂರಾರು ಜನರು 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ನಡೆಸಿದ್ದರು. ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 158 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 307, 143, 147, 148, 323, 324, 333, 353, 504, 427 ಮತ್ತು 149, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ–1984ರ ಕಲಂ 3 ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ 16(1), (ಬಿ) 18, 20ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಒಟ್ಟು 43 ಪ್ರತ್ಯೇಕ ಪ್ರಕರಣಗಳಲ್ಲಿನ ಆರೋಪಿಗಳು ಭಾರತೀಯ ದಂಡ ಸಂಹಿತೆ–1869, ಸಾರ್ವಜನಿಕ ಆಸ್ತಿ ಹಾನಿಗೆ ತಡೆ–1984, ಕಾನೂನು ಬಾಹಿರ ಚಟುವಟಿಕೆ ತಡೆ–1967, ವಿಪತ್ತು ನಿರ್ವಹಣೆ–2005 ಮತ್ತು ಧಾರ್ಮಿಕ ಸ್ಥಳಗಳ ದುರ್ಬಳಕೆ ತಡೆ ಕಾಯ್ದೆ–1988ರ ವಿವಿವಿಧ ಕಲಂಗಳಡಿಯ ಅಪರಾಧಗಳನ್ನು ಎದುರಿಸುತ್ತಿದ್ದಾರೆ.
ಯಾವುದೇ ಸರ್ಕಾರ ತಮ್ಮ ರಾಜಕೀಯ ಅನುಕೂಲಗಳಿಗಾಗಿ ಸಂವಿಧಾನದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪು ಎತ್ತಿ ತೋರಿಸಿದೆಗಿರೀಶ್ ಭಾರದ್ವಾಜ್, ಅರ್ಜಿದಾರ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ದುಷ್ಪೃತ್ಯಗಳಿಗೂ ರಕ್ಷಣೆ ಸಿಗುತ್ತದೆ ಎಂಬ ಮನಃಸ್ಥಿತಿಯ ದುಷ್ಟ ಶಕ್ತಿಗಳಿಗೆ ಹೈಕೋರ್ಟ್‌ನ ಈ ತೀರ್ಪು ಎಚ್ಚರಿಕೆ ಗಂಟೆಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ನರಗುಂದದ ಬಿ.ಆರ್.ಯಾವಗಲ್, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ, ಮಾಜಿ ಶಾಸಕರಾದ ದಾವಣಗೆರೆಯ ಎಸ್.ಎ.ರವೀಂದ್ರನಾಥ್, ಬೆಳಗಾವಿಯ ಸಂಜಯ ಪಾಟೀಲ, ಬಾಗಲಕೋಟೆಯ ವೀರಣ್ಣ ಚರಂತಿಮಠ, ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ಬೆಳಗಾವಿಯ ಅನಿಲ ಬೆನಕೆ, ಡಾ.ಎಸ್.ಸಿದ್ದಯ್ಯ, ಬೆಂಗಳೂರು ಗಾಮಾಂತರ ಜಿಲ್ಲೆಯ ಬಿ.ಶಿವಣ್ಣ, ಭದ್ರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಕಲಬುರಗಿ ಜಿಲ್ಲೆಯ ದರ್ಗಾ ಹಜರತ್ ಮಲಿಕುಲ್ ಮಶಾಲ್‌ಕಹ್ ಮಕ್ದೂಮ್ ಲಾಡಿ ಅನ್ಸಾರಿ (ಸುನ್ನಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್.ಅಂಗಡಿ, ಮೈಸೂರಿನ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್.ಭಾಸ್ಕರ್, ಭೀಮ್ ಆರ್ಮಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಘು ಚಾಕ್ರಿ. ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಹುಬ್ಬಳ್ಳಿಯ ಅಂಜುಮನ್ ಇ-ಇಸ್ಲಾಂ ಅಡಿ ರಚಿಸಲಾಗಿದ್ದ ಪರಿಹಾರ ಸಮಿತಿಯ ಸದಸ್ಯರು, ರಾಯಚೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್.ಪ್ರಸಾದ್, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪರವಾದ ಚುಕ್ಕಿ ನಂಜುಂಡಸ್ವಾಮಿ ಮತ್ತು ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿತ್ತು.
ರಾಜಕಾರಣದಲ್ಲಿ ಚುನಾವಣೆಯ ಸಂದರ್ಭವನ್ನು ಹೊರತುಪಡಿಸಿ ಅಧಿಕಾರಕ್ಕೆ ಬಂದ ನಂತರ ಜನರ ರಕ್ಷಣೆಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಸಮಾಜಘಾತಕ ಶಕ್ತಿಗಳ ಹೆಡೆಮುರಿ ಕಟ್ಟುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಇನ್ನು ಮುಂದಾದರೂ ಕಾಂಗ್ರೆಸ್ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಸುಭದ್ರಗೊಳಿಸುವ ಬದ್ಧತೆ ತೋರಲಿ. ಸಮಾಜಘಾತುಕ ಮುಸ್ಲಿಂ ಕೋಮುವಾದಿ ಗೂಂಡಾಗಳಿಗೆ ರಕ್ಷಣೆ ಒದಗಿಸುವುದನ್ನು ನಿಲ್ಲಿಸಲಿಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಪ್ರಕರಣವನ್ನು ವಾಪಸ್ ಪಡೆಯುವುದು ಸರಿಯಲ್ಲ ಎಂದು ನಾನು ಹೇಳಿದ್ದೆ. ಒತ್ತಡ ಮತ್ತು ಓಲೈಕೆ ರಾಜಕಾರಣಕ್ಕಾಗಿ ಸರ್ಕಾರ ಪ್ರಕರಣ ವಾಪಸ್ ಪಡೆದಿತ್ತು. ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಈಗ ಛೀಮಾರಿ ಹಾಕಿದೆ. ರಾಜ್ಯದ ಸಚಿವ ಸಂಪುಟವು ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು, ಓಲೈಕೆ ರಾಜಕಾರಣ ವನ್ನಲ್ಲ.ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಡೆಸಿದವರ ವಿರುದ್ಧ ಸರ್ಕಾರವು ಇನ್ನಾದರೂ ಕಾನೂನು ಕ್ರಮ ತೆಗೆದುಕೊಳ್ಳಲಿಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
ತಾವು ಕೋಮುವಾದದ ವಿರೋಧಿಗಳು ಎಂದು ಪೋಸು ನೀಡುವ ಕಾಂಗ್ರೆಸ್ ಪಕ್ಷವು, ಮತ್ತೊಂದೆಡೆ ಕೋಮುವಾದಿಗಳಿಗೆ ಆಶ್ರಯ ನೀಡುತ್ತದೆ. ಸರ್ಕಾರ ವಾಪಸ್ ಪಡೆದಿದ್ದ 43 ಪ್ರಕರಣಗಳಲ್ಲಿ ಒಂದಾದರೂ ಜನಪರ ಹೋರಾಟದ, ಕನ್ನಡ ಚಳವಳಿಗಾರರ ಅಥವಾ ರೈತರ ಪರ ಹೋರಾಟದ ಪ್ರಕರಣಗಳಿದ್ದವೇ? ಪೊಲೀಸ್ ಠಾಣೆಗೆ ಬೆಂಕಿ ಹಾಕಿ, ಸಾರ್ವಜನಿಕರ ಆಸ್ತಿ ಹಾನಿ ಮಾಡಿದ ಪ್ರಕರಣಗಳವು. ಹೈಕೋರ್ಟ್ ಇವರಿಗೆ ಸರಿಯಾಗಿ ಛೀಮಾರಿ ಹಾಕಿದೆಸಿ.ಟಿ.ರವಿ, ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.