ADVERTISEMENT

ಪೊಲೀಸರಿಗೆ ಸೌಜನ್ಯದ ಭಾಷೆ ಗೊತ್ತೇ: ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 13:30 IST
Last Updated 23 ಅಕ್ಟೋಬರ್ 2025, 13:30 IST
   

ಬೆಂಗಳೂರು: ‘ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚುವ ಸಮಯದಲ್ಲಿ ಪೊಲೀಸರು ಸೌಜನ್ಯದಿಂದ ವರ್ತಿಸುತ್ತಾರೆಯೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ನಮ್ಮ ಪೊಲೀಸರು ಯಾವಾಗ ಸೌಜನ್ಯದ ಭಾಷೆ ಮಾತನಾಡಲು ಆರಂಭಿಸಿದ್ದಾರೆ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಅನ್ನು ಕುಟುಕಿತು.

‘ಎಚ್‌ಎಎಲ್‌ ಠಾಣೆಯ ಪೊಲೀಸರು ನನ್ನ ವಿರುದ್ಧ 29ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸಬೇಕು’ ಎಂದು ಕೋರಿ ನಗರದ ರಾಮಾಂಜಲು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್‌ ಅವರಿಗೆ ನ್ಯಾಯಮೂರ್ತಿಗಳು, ‘ಕುಡಿದು ಚಾಲನೆ ಮಾಡುವವರೆಲ್ಲಾ ಹೀಗೇನೆ. ಅಂಥವರನ್ನು ಚೆಕ್‌ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇನ್ನೇನು ಮಾಡೋಕ್ಕಾಗುತ್ತೆ’ ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಸುನಿಲ್‌ ಕುಮಾರ್, ‘ಸ್ವಾಮಿ ಎಫ್‌ಐಆರ್‌ನಲ್ಲಿ ಪೊಲೀಸರು ಸೌಜನ್ಯದಿಂದ ಪ್ರಶ್ನಿಸಿದರು ಎಂದು ಬರೆಯಲಾಗಿದೆ. ಸೌಜನ್ಯದಿಂದ ಕೇಳಿದ್ರೆ ನಮ್ಮ ಅರ್ಜಿದಾರರು ಯಾಕೆ ಸಿಡಿಮಿಡಿಗೊಳ್ಳುತ್ತಿದ್ದರು? ಅವರು ಬ್ಯಾರಿಕೇಡ್‌ ಹಾಕಿ ನಿಲ್ಲಿಸುವಾಗ ಇವರು ಕಾರನ್ನು ಪಕ್ಕಕ್ಕೆ ತೆಗೆದುಕೊಂಡಿದ್ದಾರೆ ಅಷ್ಟೇ. ಮಾತ್ರವಲ್ಲ, ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚುವಾಗ ವಿಡಿಯೋಗ್ರಾಫ್‌ ಮಾಡಬೇಕು ಎಂದು ಸರ್ಕಾರ 2023ರಲ್ಲೇ ಸುತ್ತೋಲೆ ಹೊರಡಿಸಿದೆ. ಆದರೆ, ಪೊಲೀಸರು ಈ ಪ್ರಕರಣದಲ್ಲಿ ವಿಡಿಯೋಗ್ರಾಫ್‌ ಅನ್ನೇ ಮಾಡಿಲ್ಲ. ವೈದ್ಯಕಿಯ ವರದಿಯೂ ಇಲ್ಲ’ ಎಂದರು.

‘ಅರ್ಜಿದಾರರು ನನ್ನ ಮೇಲೆಯೇ ಕಾರು ಚಲಾಯಿಸಿದರು. ಇದರಿಂದ ಮೊಣಕಾಲಿನ ಬಳಿ ಗಂಭೀರ ಸ್ವರೂಪದ 11 ಗಾಯಗಳಾದವು. ತಕ್ಷಣವೇ ಮಣಿಪಾಲ್‌ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದೆ ಎಂಬ ಹೆಡ್‌ ಕಾನ್‌ಸ್ಟೆಬಲ್‌ ವಿವರಣೆ ಸತ್ಯಕ್ಕೆ ದೂರ. ವಾಸ್ತವದಲ್ಲಿ ವೈದ್ಯರು ಅವರಿಗೆ ಆವತ್ತು ಮೊಣಕಾಲಿನ ಮೇಲೆ ಐಸ್‌ ಪ್ಯಾಕ್‌ ಇರಿಸಿ ಸಾಕು ಎಂದು ಸಲಹೆ ನೀಡಿದ್ದಾರೆ. ಹೆಡ್‌ ಕಾನ್‌ಸ್ಟೆಬಲ್ ಸಲ್ಲಿಸಿರುವ ವೈದ್ಯಕೀಯ ವರದಿ 1 ತಿಂಗಳ ನಂತರ ಸಲ್ಲಿಸಿರುವ ಸುಳ್ಳು ದಾಖಲೆ. ಹಾಗಾಗಿ, ಹುರುಳಿಲ್ಲಿದ ಈ ದೂರನ್ನು ವಜಾಗೊಳಿಸಬೇಕು’ ಎಂದು ಕೋರಿದರು.

ಇದಕ್ಕೆ ರಾಜ್ಯ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚುವಾಗ ಸೌಜನ್ಯದಿಂದ ಮಾತನಾಡಿಸಿದರೆ ಅವರು ಎಲ್ಲಿ ಕೇಳುತ್ತಾರೆ. ಅವರನ್ನು ಬೇರೆಯದೇ ಧಾಟಿಯಲ್ಲಿ ಪ್ರಶ್ನಿಸಬೇಕಾಗುತ್ತದೆ’ ಎಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ ಎರಡನೇ ವಾರಕ್ಕೆ ಮುಂದೂಡಿದೆ.

ಪ್ರಕರಣವೇನು?: 

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸುವ ವಿಶೇಷ ಕರ್ತವ್ಯದ ಮೇರೆಗೆ ನಿಯೋಜನೆಗೊಂಡಿದ್ದ ಹೆಡ್‌ ಕಾನ್‌ಸ್ಟೆಬಲ್‌, ಎಚ್‌ಎಎಲ್‌ ಅಂಚೆ ಕಚೇರಿ ಜಂಕ್ಷನ್‌ ಹತ್ತಿರ 2021ರ ಅಕ್ಟೋಬರ್ 21ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ರಾಮಾಂಜಲು ವಿರುದ್ಧ ಪ್ರಕರಣ ದಾಖಲಿಸಿದ್ದರು.

‘ಅರ್ಜಿದಾರರು ಅಂದು ರಾತ್ರಿ 10.45ರ ಸುಮಾರಿಗೆ ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬರುತ್ತಿದ್ದರು. ಹೀಗಾಗಿ, ಕಾರನ್ನು ನಿಲ್ಲಿಸಿ ಚಾಲಕನ ಸ್ಥಾನದಲ್ಲಿದ್ದ ಅರ್ಜಿದಾರರನ್ನು ಮೆಷಿನ್‌ ಮೂಲಕ ಪರೀಕ್ಷಿಸಲು ಸೌಜನ್ಯದಿಂದ ಸೂಚಿಸಿ ಮುಂದಾಗುತ್ತಿದ್ದಂತೆಯೇ ಅವರು, ನಮ್ಮ ಮೇಲೆ ಮೇಲೆ ಕಾರು ಚಲಾಯಿಸಲು ಪ್ರಯತ್ನಿಸಿದರು’ ಎಂಬ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆ–1860ರ ಕಲಂ 353,307,279,427,506 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ 29ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.