ADVERTISEMENT

ಡಿಕೆಶಿ ಪ್ರಕರಣ: 2 ವಾರ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 19:54 IST
Last Updated 3 ಮಾರ್ಚ್ 2023, 19:54 IST
   

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಪುನಃ ಎರಡು ವಾರಗಳ ಕಾಲ ವಿಸ್ತರಿಸಿದೆ.

ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ತಡೆ ಆದೇಶ ವಿಸ್ತರಿಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿ, ‘ನನ್ನ ಮಗಳಿಗೂ ಸಿಬಿಐ ನೋಟಿಸ್ ನೀಡಿದೆ ಎಂದು ಶಿವಕುಮಾರ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ, ಅರ್ಜಿದಾರರಿಗಾಗಲೀ ಅವರ ಮಗಳಿಗಾಗಲೀ ಸಿಬಿಐ ಯಾವುದೇ ನೋಟಿಸ್ ನೀಡಿಲ್ಲ. ಅರ್ಜಿದಾರರ ಮಗಳು ಓದಿದ್ದ ಶಾಲೆ ಮತ್ತು ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ. ಅವರ ಶುಲ್ಕವನ್ನು ಯಾರು ಪಾವತಿಸಿದ್ದಾರೆ ಮತ್ತು ಎಷ್ಟು ಪಾವತಿಸಿದ್ದಾರೆ ಎಂಬ ಮಾಹಿತಿಯನ್ನಷ್ಟೇ ಕೇಳಲಾಗಿದೆ’ ಎಂದರು.

ADVERTISEMENT

‘ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ತನಿಖೆಯ ಕುರಿತಂತೆ ಹಲವು ಮಹತ್ವದ ಮಾಹಿತಿಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶಗಳನ್ನು ಆಧರಿಸಿ ತನಿಖೆ ಪೂರ್ಣಗೊಳಿಸಬೇಕಿದೆ. ಆದರೆ, ತಡೆಯಾಜ್ಞೆ ಇರುವುದರಿಂದ ತನಿಖೆ ಮುಂದುರಿಸಲಾಗುತ್ತಿಲ್ಲ. ಆದ್ದರಿಂದ, ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಕೋರಿದರು.

ಆದರೆ, ಇದನ್ನು ಮಾನ್ಯ ಮಾಡದ ನ್ಯಾಯಪೀಠ ತನಿಖಾ ಪ್ರಗತಿ ವರದಿಯನ್ನು ಪ್ರಸನ್ನ ಕುಮಾರ್ ಅವರಿಗೇ ಹಿಂದಿರುಗಿಸಿತು.

ಸಿಬಿಐ ವಾದಕ್ಕೆ ಪ್ರತ್ಯುತ್ತರ ನೀಡಲು ಶಿವಕುಮಾರ್ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.