ADVERTISEMENT

ಮೇಕೆದಾಟು: ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ ವಿಚಾರಣೆಗೆ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 19:21 IST
Last Updated 28 ಜೂನ್ 2022, 19:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲಾದ ಪಾದಯಾತ್ರೆಯಲ್ಲಿಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್‌ ಪಕ್ಷದ 13 ಮುಖಂಡರ ವಿರುದ್ಧ ರಾಮನಗರ ಗ್ರಾಮೀಣ ಠಾಣಾ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ನಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಬೇಕು’ ಎಂದು ಕೋರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಪಕ್ಷದ 13 ಮುಖಂಡರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿಯ ಮುಂದಿನ ಕಾನೂನು ಪ್ರಕ್ರಿಯೆಗೆ ತಡೆ ನೀಡಿದ ನ್ಯಾಯಪೀಠ, ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು
ದೂರುದಾರರಾದ ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದರು.

ಪ್ರಕರಣವೇನು?: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ 2022ರ ಜನವರಿ 9ರಿಂದ10 ದಿನಗಳವೆರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪಾದಯಾತ್ರೆ ಹಮ್ಮಿಕೊಂಡಿತ್ತು. ‘ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್ ಜನವರಿ 13ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಪೊಲೀಸರು, ಫೆಬ್ರುವರಿ 9ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.