ADVERTISEMENT

ಕಾಲುದಾರಿ, ಬಂಡಿ ಜಾಡು ಕೂಡಾ ರಸ್ತೆಗಳೇ...: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: 'ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಕಾಲುದಾರಿ, ಬಂಡಿ ಜಾಡು ಕೂಡಾ ಒಳಗೊಂಡಿರುತ್ತವೆ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಜಮೀಣು ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ ‘ಬಿ ಖರಾಬ್’ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 67ರ ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ ಅಥವಾ ಬಂಡಿ ಜಾಡು ಎಂಬ ಗಾಡಿ ಜಾಡು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ‘ ಎಂದು ನ್ಯಾಯಪೀಠ ಹೇಳಿದೆ.

‘ಕಾಲುದಾರಿ, ಬಂಡಿ ಜಾಡು ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು ‘ಬಿ ಖರಾಬ್’ ಎಂದು ವರ್ಗೀಕರಿಸಲಾಗಿದೆ. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ‘ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: 1999–2000ದ ಅವಧಿಯಲ್ಲಿ ಅರ್ಜಿದಾರ ಎಪಿಎಂಸಿ ತನ್ನ ಅನುಕೂಲಕ್ಕಾಗಿ ಕೆಲವು ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಉಪ ಮಾರುಕಟ್ಟೆಗಾಗಿ ಬಡಾವಣೆ ರಚಿಸಿ, ಕಟ್ಟಡಗಳನ್ನು ನಿರ್ಮಿಸಿದ ಬಳಿಕ ಹಲವರಿಗೆ ವಹಿವಾಟು ನಡೆಸಲು ನಿವೇಶನ ಹಂಚಿಕೆ ಮಾಡಿತ್ತು.

2019ರ ಫೆಬ್ರವರಿ 5ರಂದು ಕಾಲುದಾರಿಯನ್ನು ಮುಚ್ಚಿರುವ ಸಂಬಂಧ ಸ್ಥಳೀಯ ತಹಶೀಲ್ದಾರ್ ಎಪಿಎಂಸಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಪಿಎಂಸಿ, ‘ಅರ್ಜಿಗೆ ಸಂಬಂಧಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಲಾಗಿದೆ. ಇಡೀ ಆಸ್ತಿ ಎಪಿಎಂಸಿಗೆ ಸೇರಿದೆ. ಈ ಜಮೀನಿನಲ್ಲಿ ಯಾವುದೇ ಕಾಲು ದಾರಿ ಇಲ್ಲ‘ ಎಂದು ಉತ್ತರಿಸಿತು. ಈ ಅಂಶಗಳನ್ನು ಉಲ್ಲೇಖಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ‘ಕೇವಲ 10 ಎಕರೆ 15 ಗುಂಟೆ ಜಮೀನನ್ನು ಮಾತ್ರವೇ ಸ್ವಾಧೀನಪಡಿಸಿಕೊಂಡು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿದೆ ಮತ್ತು ಪಕ್ಕದ ಬಿ ಖರಾಬ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿಲ್ಲ ಅಥವಾ ಅರ್ಜಿದಾರರಿಗೆ ವರ್ಗಾಯಿಸಲಾಗಿಲ್ಲ‘ ಎಂದು ತಿಳಿಸಿದ್ದರು.

‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ ’ಬಿ ಖರಾಬ್’ನಲ್ಲಿ ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು‘ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.