ADVERTISEMENT

ಕೈದಿಗಳಿಗೆ ಪೆರೋಲ್ ಪ್ರಕ್ರಿಯೆ: ಡಿಜಿಟಲೀಕರಣಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 15:58 IST
Last Updated 18 ಅಕ್ಟೋಬರ್ 2025, 15:58 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೈದಿಗಳಿಗೆ ಪೆರೋಲ್‌ ಮಂಜೂರು ಮಾಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಆಪರಾಧಿಯೊಬ್ಬರ ತಾಯಿ, ‘ನಮ್ಮ ಮನೆ ದುರಸ್ತಿ ಮಾಡಬೇಕಿದ್ದು, ಮಗನ ಸಹಾಯ ಬೇಕಿದೆ. ಅವನಿಗೆ 30 ದಿನಗಳ ಪೆರೋಲ್‌ ಮಂಜೂರು ಮಾಡಲು ನಿರ್ದೇಶಿಸಬೇಕು’ ಎಂದು ಕೋರಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ‌.

‘ಅರ್ಜಿ ಸಲ್ಲಿಸುವ ಹಾಲಿ ಪ್ರಕ್ರಿಯೆಯ ಬದಲಿಗೆ, ಪೆರೋಲ್‌ ಅರ್ಜಿ ಸಲ್ಲಿಕೆಯಿಂದ ಹಿಡಿದು ಅದನ್ನು ಪರಿಶೀಲಿಸಿ ಮಂಜೂರು ಮಾಡುವವರೆಗಿನ ಒಟ್ಟಾರೆ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಪರಿವರ್ತಿಸುವ ಬಗ್ಗೆ ನಾಲ್ಕು ವಾರಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಿ’ ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಡಿಜಿಪಿಗೆ ನಿರ್ದೇಶಿಸಿದೆ.

ADVERTISEMENT

‘2021ರ ಪೆರೋಲ್ ನಿಯಮಾವಳಿಯಲ್ಲಿ ಕೆಲವು ದೋಷಗಳಿದ್ದು, ಅವುಗಳನ್ನೂ ಸರಿಪಡಿಸಬೇಕಿದೆ’ ಎಂದು ನ್ಯಾಯಪೀಠ ಸೂಚಿಸಿದೆ.

‘ಹಾಲಿ ವ್ಯವಸ್ಥೆಯಲ್ಲಿ ಯಾವುದೇ ಅಪರಾಧಿ ಪೆರೋಲ್‌ ಬೇಕೆಂದರೂ ಭೌತಿಕವಾಗಿ (ಮುಖತಃ) ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿಯ ಫಾಲೋ ಅಪ್‌ ಮಾಡಬೇಕಿದೆ. ಇನ್ನೂ ಈ ಹಳೆಯ ಪದ್ಧತಿಯನ್ನೇ ಮುಂದುವರಿಸುವುದು ಸೂಕ್ತವಲ್ಲ. ಹಾಗಾಗಿ, ಇನ್ನು ಮುಂದೆ ಪೆರೋಲ್‌ ಅರ್ಜಿ ಸಲ್ಲಿಸಲು ಆನ್‌ ಲೈನ್‌ ನಲ್ಲಿಯೂ ಅವಕಾಶ ಕಲ್ಪಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.