ADVERTISEMENT

ಉದ್ಯಮಿ ಬಿ.ಆರ್.ಶೆಟ್ಟಿ ವಿದೇಶ ಪ್ರಯಾಣಕ್ಕೆ ಹೈಕೋರ್ಟ್ ಅನುಮತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 16:02 IST
Last Updated 9 ಫೆಬ್ರುವರಿ 2024, 16:02 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ಬಹುಕೋಟಿ ಸಾಲ ಹಿಂದಿರುಗಿಸದೇ ಇರುವ ಕಾರಣಕ್ಕಾಗಿ ಉದ್ಯಮಿ ಬಿ.ಆರ್.ಶೆಟ್ಟಿ ವಿರುದ್ಧ ಹೊರಡಿಸಲಾಗಿದ್ದ ಲುಕ್‌ಔಟ್‌ ಸರ್ಕ್ಯುಲರ್ (ಎಲ್‌ಒಸಿ) ಅನ್ನು ಅಮಾನತಿನಲ್ಲಿ ಇರಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಈ‌ ಸಂಬಂಧ ಬಿ.ಆರ್.ಶೆಟ್ಟಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಅರ್ಜಿದಾರರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದೆ.

ADVERTISEMENT

‘ಅರ್ಜಿದಾರರು ₹ 1 ಕೋಟಿ ಮೊತ್ತದ ಜಾಮೀನು ಭದ್ರತೆ ಒದಗಿಸಬೇಕು. ಇವರ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ಇಲ್ಲದಿದ್ದರೆ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶ ಪ್ರಯಾಣಕ್ಕೆ ಅನುಮತಿಸಬಹುದು’ ಎಂದು ಕೇಂದ್ರ ಗೃಹ ಖಾತೆ ವ್ಯಾಪ್ತಿಯ ವಲಸೆ ಕಚೇರಿಗೆ ನಿರ್ದೇಶಿಸಿದೆ.

ಅಂತೆಯೇ, ‘ಶೆಟ್ಟಿ ಅವರ ಒಡೆತನದಲ್ಲಿರುವ ಯಾವುದೇ ಸ್ಥಿರಾಸ್ತಿ ಡಿಕ್ರಿಗಳನ್ನು ಪರಭಾರೆ ಮಾಡಬಾರದು’ ಎಂದೂ ನ್ಯಾಯಪೀಠ ಷರತ್ತು ವಿಧಿಸಿದೆ.

‘ಬಿ.ಆರ್.ಶೆಟ್ಟಿ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳಿಲ್ಲ. ಭಾರತೀಯ ಪ್ರಜೆಯಾಗಿರುವ ಅವರಿಗೀಗ 80 ವರ್ಷವಾಗಿದೆ’ ಎಂಬ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ ಹಾಗೂ ಬಿ.ವಿ.ಆಚಾರ್ಯ ಮಂಡಿಸಿದ್ದ ವಾದವನ್ನು ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ. ಕೇಂದ್ರ ಸರ್ಕಾರದ ಪರ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ಬ್ಯಾಂಕುಗಳ‌ ಬಹುಕೋಟಿ ಸಾಲ ವಸೂಲಾತಿ ಪ್ರಕ್ರಿಯೆ ಬಾಕಿ ಇದೆ’ ಎಂಬ ಹಿನ್ನೆಲೆಯಲ್ಲಿ ಶೆಟ್ಟಿ ಅವರ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಲಸೆ ಕಚೇರಿಗೆ ಮನವಿ ಸಲ್ಲಿಸಿದ್ದವು. ಇದರ ಅನುಸಾರ ವಲಸೆ ಕಚೇರಿ ಅಧಿಕಾರಿಗಳು ಶೆಟ್ಟಿ ಅವರ ವಿರುದ್ಧ ಲುಕ್‌ಔಟ್‌ ಸರ್ಕ್ಯುಲರ್ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.