ADVERTISEMENT

ಅರ್ಚಕರಿಗೆ ತಸ್ತಿಕ್ ಹಣ ಪಾವತಿ: ಡಿಬಿಟಿ ವ್ಯವಸ್ಥೆ ಪ್ರಶ್ನಿಸಿದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:44 IST
Last Updated 6 ಆಗಸ್ಟ್ 2025, 15:44 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ನೇರ ನಗದು ವರ್ಗಾವಣೆ’ (ಡಿಬಿಟಿ) ಮೂಲಕ ಅರ್ಚಕರಿಗೆ ತಸ್ತಿಕ್ ಹಣ ಪಾವತಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಬೇಕು. ಈ ಹಿಂದೆ ಜಾರಿಯಲ್ಲಿದ್ದ ಸ್ವಯಂ ದೃಢೀಕರಣ ಆಧಾರಿತ ತಸ್ತಿಕ ಹಣ ಪಾವತಿ ಪದ್ಧತಿ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರದ ಕೆ.ಎಸ್.ಪದ್ಮನಾಭಾಚಾರ್ ಸೇರಿದಂತೆ ಐವರು ಅರ್ಚಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಡಿಬಿಟಿ ವ್ಯವಸ್ಥೆಯಡಿ ತಸ್ತಿಕ್‌ ಹಣ ಪಡೆದುಕೊಳ್ಳಬೇಕಾದರೆ ಹತ್ತಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಆಧಾರ್ ಸೇರಿದಂತೆ ಹಲವು ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು. ಈ ವ್ಯವಸ್ಥೆ ತುಂಬಾ ತಾಂತ್ರಿಕತೆಯಿಂದ ಕೂಡಿದ್ದು ಗೊಂದಲಕಾರಿಯಾಗಿದೆ. ದೇವಸ್ಥಾನದ ಅರ್ಚಕರಿಗೆ ತಂತ್ರಜ್ಞಾನ ಅಷ್ಟಾಗಿ ತಿಳಿದಿರುವುದಿಲ್ಲ. ಹಳ್ಳಿಗಾಡು, ಅರಣ್ಯ ಪ್ರದೇಶದ ಅರ್ಚಕರಿಗೆ ನೆಟ್‌ವರ್ಕ್ ಸಮಸ್ಯೆಯೂ ಇರುತ್ತದೆ. ದಾಖಲೆಗಳನ್ನು ಸಲ್ಲಿಸಲು ಅರ್ಚಕರು ಹತ್ತಾರು ಕಿ.ಮೀ ಪ್ರಯಾಣಿಸಿ ತಹಶೀಲ್ದಾರ್ ಕಚೇರಿಗೆ ಬರಬೇಕು. ಇದರಿಂದ ದೈನಂದಿನ ಪೂಜಾ ಕೈಂಕರ್ಯಗಳಿಗೆ ತೊಂದರೆ ಆಗುತ್ತದೆ’ ಎಂದರು.

‘ಡಿಬಿಟಿ ವ್ಯವಸ್ಥೆಗೆ ನಮ್ಮ ವಿರೋಧವಿಲ್ಲ. ಆದರೆ, ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ತಿಳಿವಳಿಕೆ ನೀಡಬೇಕಾಗಿದೆ. ಆದ್ದರಿಂದ ಡಿಬಿಟಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಬದಲಿಗೆ ಸ್ವಯಂ ದೃಢೀಕರಣ ಆಧಾರಿತ ತಸ್ತಿಕ್‌ ಹಣ ಪಾವತಿ ವ್ಯವಸ್ಥೆ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಆರ್ಥಿಕ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕೆಂಬ ಉದ್ದೇಶದಿಂದ ಡಿಬಿಟಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಸೋರಿಕೆ ತಡೆದು ಪಾರದರ್ಶಕತೆ ತರುವುದು ಡಿಬಿಟಿ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ. ಡಿಬಿಟಿ ವ್ಯವಸ್ಥೆಯಿಂದ ಅರ್ಜಿದಾರರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಬರಲಾರದು. ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳ ನೆರವು ಪಡೆದುಕೊಳ್ಳಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ  ಅರ್ಜಿ ವಜಾಗೊಳಿಸಿತು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅರ್ಚಕರಿಗೆ ಡಿಬಿಟಿ ಮೂಲಕ ತಸ್ತಿಕ್‌ ಹಣ ಪಾವತಿಸಲು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಿ’ ಎಂದು ಆದೇಶಿಸಿ ಧಾರ್ಮಿಕ ದತ್ತಿ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ 2024ರ ಫೆಬ್ರುವರಿ 19ರಂದು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.