ADVERTISEMENT

ಸತೀಶ್ ಸೈಲ್ ಅರ್ಜಿ: ಕಮಾಂಡೊ ಆಸ್ಪತ್ರೆ ಉತ್ತರಕ್ಕೆ ಹೈಕೋರ್ಟ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:04 IST
Last Updated 21 ನವೆಂಬರ್ 2025, 0:04 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ ಅವರ ಆರೋಗ್ಯ ತಪಾಸಣೆಗೆ ನಿರಾಕರಿಸಿ ಇ–ಮೇಲ್‌ ಬರೆದಿರುವ ಕಮಾಂಡ್‌ ಆಸ್ಪತ್ರೆಯ ನಡೆಗೆ ಹೈಕೋರ್ಟ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಬೇಲೇಕೇರಿ ಅಕ್ರಮ ಅದಿರು ಸಾಗಣೆ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್‌ ಸೈಲ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇದೊಂದು ಸೌಜನ್ಯರಹಿತ ನಡವಳಿಕೆ’ ಎಂದು ಕಿಡಿ ಕಾರಿದೆ.

ಸೈಲ್ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ಮತ್ತು ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಎಸ್‌.ಸುನಿಲ್ ಕುಮಾರ್, ‘ಸೈಲ್‌ ಅವರ ಆರೋಗ್ಯ ಮೌಲ್ಯಮಾಪನ ಮಾಡಲು ಕಮಾಂಡೊ ಆಸ್ಪತ್ರೆ ನಿರಾಕರಿಸಿದೆ’ ಎಂಬ ಉತ್ತರವನ್ನು ನ್ಯಾಯಪೀಠಕ್ಕೆ ಅರುಹಿದರು.

ADVERTISEMENT

ಇದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ನ್ಯಾಯಾಲಯ ಮನವಿ ಮಾಡಿದಾಗ, ಇದು ಉತ್ತರಿಸುವ ರೀತಿಯಲ್ಲ. ಕಮಾಂಡೊ ಆಸ್ಪತ್ರೆ ಅಖಿಲ ಭಾರತ ಸಂಸ್ಥೆಯಾಗಿರಬಹುದು. ಆದರೆ, ಇದು ಉತ್ತರಿಸುವ ರೀತಿಯಲ್ಲ. ಪ್ರತಿಕ್ರಿಯೆ ನೀಡಲು ನಮಗೂ ಬೇರೆ ದಾರಿಯಿದೆ’ ಎಂದು ಅಸಮಾಧಾನ ಹೊರಹಾಕಿತು.

ಕೆಲಕಾಲ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಿ ಆದೇಶಿಸಿತು. ಅಂತೆಯೇ ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿ, ‘ಅರ್ಜಿದಾರರ ಮೆಮೊಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯಲ್ಲಿ ನಿರ್ಣಯಿಸಲಾಗುವುದು’ ಎಂದು ತಿಳಿಸಿತು.

ಇ.ಡಿ ದಾಖಲಿಸಿರುವ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿರುವುದನ್ನು ಹಾಗೂ ಜಾಮೀನು ರಹಿತ ವಾರಂಟ್‌ ಹೊರಡಿಸಿರುವುದನ್ನು ಪ್ರಶ್ನಿಸಿ ಸೈಲ್‌ ಈ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.