ADVERTISEMENT

ಪೊಲೀಸ್‌–ಜೈಲು ಕಾರ್ಯ ವೈಖರಿಗೆ ಹೈಕೋರ್ಟ್ ಕೆಂಡಾಮಂಡಲ

ವಿಚಾರಣೆ ರಹಿತ ನ್ಯಾಯಾಂಗ ಬಂಧನದಲ್ಲಿ ಆರೋಪಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 15:03 IST
Last Updated 20 ಫೆಬ್ರುವರಿ 2026, 15:03 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು:‌ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯೊಬ್ಬರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸದ ಜೈಲು ಅಧಿಕಾರಿಗಳು ಮತ್ತು ಇದೇ ಆರೋಪಿ ಜೈಲಿನಲ್ಲಿದ್ದರೂ ಜಾಮೀನು ರಹಿತ ವಾರಂಟ್‌ ಅನ್ನು ಜಾರಿಗೆ ತರಲು ಊರೆಲ್ಲಾ ತಲಾಶ್‌ ಮಾಡಿದ ಎಚ್‌ಎಎಲ್‌ ಪೊಲೀಸರ ಕಾರ್ಯ ವೈಖರಿಗೆ ಕೆಂಡಾಮಂಡಲವಾದ ಹೈಕೋರ್ಟ್‌, ಕಾರಾಗೃಹಗಳ ಡಿಐಜಿ ಮತ್ತು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಯ ಖುದ್ದು ಹಾಜರಿಗೆ ಆದೇಶಿಸಿದೆ.

ಈ ಸಂಬಂಧ ನಗರದ ಮದರಸಾ ಇಸ್ಲಾಂಪುರ ನಿವಾಸಿ ಇಮ್ರಾನ್‌ ಅಲಿಯಾಸ್‌ ಕುಳ್ಳ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಸ್.ಆರ್.ಜಗದೀಶ, ‘ಆರೋಪಿ ಇಮ್ರಾನ್‌ ಅವರನ್ನು 2022ರ ಡಿಸೆಂಬರ್ 20ರಿಂದ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈತನಕ ವಿಚಾರಣಾ ನ್ಯಾಯಾಲಯಕ್ಕೆ ಕೇವಲ ಮೂರು ಬಾರಿ ಮಾತ್ರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗಿದೆ. ಅಂತೆಯೇ, ಎಚ್‌ಎಲ್‌ ಪೊಲೀಸ್‌ ಠಾಣೆಯಲ್ಲೇ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಬಾಡಿ ವಾರಂಟ್‌ ಹೊರಡಿಸಲಾಗಿತ್ತು.  ಆದರೆ, ಆಸಾಮಿ ಮನೆಯಲ್ಲಿ ಇಲ್ಲದ ಕಾರಣ ವಾರಂಟ್‌ ಜಾರಿಗೊಳಿಸಿಲ್ಲ ಎಂದು ಎಚ್‌ಎಎಲ್‌ ಪೊಲೀಸರು ತಿಳಿಸಿದ್ದಾರೆ’ ಎಂದರು.

ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಈ ವಿಷಯದಲ್ಲಿ ಪೊಲೀಸರಿಂದ ತಪ್ಪಾಗಿದೆ’ ಎಂದರು. ಪ್ರಾಸಿಕ್ಯೂಷನ್‌ ವಿವರಣೆಗೆ ಆಘಾತ ವ್ಯಕ್ತಪಡಿಸಿದ ನ್ಯಾಯಪೀಠ ‘ಅರ್ಜಿದಾರ ಅಕ್ರಮ ಕಸ್ಟಡಿಯಲ್ಲಿದ್ದಾರೆ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಜಾಮೀನು ರಹಿತ ವಾರಂಟ್‌ (ಎನ್‌ಬಿಡಬ್ಲ್ಯು) ಜಾರಿ ಮಾಡಿರುವುದು ಕಾನೂನಿನ ತತ್ವಗಳ ಉಲ್ಲಂಘನೆಯಲ್ಲವೇ’ ಎಂದು ಪ್ರಶ್ನಿಸಿತು.

ಇಮ್ರಾನ್‌ ಅವರರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲು ವಿಫಲವಾದ ಜೈಲು ಅಧಿಕಾರಿಗಳನ್ನೂ ಕಟುವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ರೆಗ್ಯುಲರ್‌ ಕೇಸಿನಲ್ಲಿ ಆರೋಪಿಯನ್ನು ಇಷ್ಟು ದೀರ್ಘ ಅವಧಿಯಿಂದ ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದರೆ ಇದು ಎಂಥ ಜೈಲು ಪ್ರಾಧಿಕಾರ? ಯಾಕೆ ಜೈಲಿನಲ್ಲಿ ವಿಡಿಯೊ ಕಾನ್ಫರೆನ್ಸ್‌ ಕನೆಕ್ಷನ್‌ ಸರಿ ಇರಲಿಲ್ಲವಾ ಅಥವಾ ಏನಾದರೂ ತಾಂತ್ರಿಕ ಸಮಸ್ಯೆ ಇತ್ತೇ? ಎಂದು ಕಿಡಿಕಾರಿತು.

‘ಈ ಲೋಪಕ್ಕೆ ಸಂಬಂಧಿಸಿದಂತೆ, ಕಾರಾಗೃಹಗಳ ಡಿಐಜಿ ಮತ್ತು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ನಾಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು’ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಶನಿವಾರಕ್ಕೆ (ಫೆ.21) ಮುಂದೂಡಿತು.

ಆರೋಪಿಯ ಕೋರಿಕೆ ಏನು?
ಅರ್ಜಿದಾರರು, ‘ನನ್ನ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ–1985ರ (ಎನ್‌ಡಿಪಿಎಸ್‌) ಮತ್ತು ಕಳ್ಳತನ ಅಪರಾಧಗಳ ಅಡಿಯಲ್ಲಿ ದಾಖಲಿಸಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಮತ್ತು ನನಗೆ ಪರಿಹಾರ ನೀಡಲು ಆದೇಶಿಸಬೇಕು’ ಎಂದು ಕೋರಿದ್ದಾರೆ.
ಒಬ್ಬ ಆರೋಪಿ ವಿರುದ್ಧ ಒಂದೇ ಠಾಣೆಯಲ್ಲಿ 2 ಪ್ರಕರಣ ಇರುವುದು ಠಾಣಾಧಿಕಾರಿಗೆ ಗೊತ್ತಿಲ್ಲ ಎಂದರೆ ಏನರ್ಥ? ಠಾಣೆಗಳಲ್ಲಿ ಏನಾಗುತ್ತಿದೆ? ಪೊಲೀಸರಿಗೆ ಸೆಟಲ್‌ಮೆಂಟ್‌ ಮಾಡಲು ಸಮಯವಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ? 
– ನ್ಯಾ.ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.