ADVERTISEMENT

ಪೋಕ್ಸೊ ಪ್ರಕರಣ: ಯಡಿಯೂರಪ್ಪ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 11:50 IST
Last Updated 14 ಜೂನ್ 2024, 11:50 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ‘ಪೋಕ್ಸೊ ಪ್ರಕರಣದ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆಯವರೆಗೂ ಬಂಧಿಸಬಾರದು’ ಎಂದು ಆದೇಶಿಸಿರುವ ಹೈಕೋರ್ಟ್‌, ಈ ಸಂಬಂಧ ಜಾಮೀನುರಹಿತ ಬಂಧನ ವಾರಂಟ್‌ ಹೊರಡಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿ ಇರಿಸಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಮತ್ತು ಈ ಪ್ರಕರಣದಲ್ಲಿ ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಜೊತೆಗೆ ‘ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು’ ಎಂದು ಕೋರಿ ಪ್ರಕರಣದ ಸಂತ್ರಸ್ತ ಬಾಲಕಿಯ ಅಣ್ಣ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರು ಶುಕ್ರವಾರ ಒಟ್ಟಿಗೇ ವಿಚಾರಣೆ ನಡೆಸಿದರು.

ವಿಚಾರಣೆಯ ವೇಳೆ ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ಸಿಐಡಿ ನೀಡಿದ್ದ ಮೊದಲನೇ ನೋಟಿಸ್‌ ಅನ್ನು ಯಡಿಯೂರಪ್ಪ ಅವರು ಮಾನ್ಯ ಮಾಡಿ ವಿಚಾರಣೆಗೆ ಹಾಜರಾಗಿದ್ದರು. ಎರಡನೇ ನೋಟಿಸ್‌ಗೆ ಪ್ರತ್ಯುತ್ತರಿಸಲು ಸಮಯ ಕೇಳಿದ್ದು, ಇದೇ 17ಕ್ಕೆ ಖುದ್ದು ಹಾಜರಾಗುವುದಾಗಿ ತಿಳಿಸಿದ್ದಾರೆ. ಆದರೆ, ಇದನ್ನು ಲೆಕ್ಕಿಸದೇ ತನಿಖಾಧಿಕಾರಿ ಕೋರ್ಟ್‌ ಮೆಟ್ಟಿಲೇರಿ ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುಮತಿಸುವಂತೆ ಕೋರಿದ್ದಾರೆ. ಇದೆಲ್ಲಾ ವ್ಯವಸ್ಥಿತವಾಗಿ ಯಡಿಯೂರಪ್ಪ ಅವರನ್ನು ಬಂಧಿಸಲೇಬೇಕೆಂಬ ಹಟಕ್ಕೆ ಬಿದ್ದಂತಹ ಧಾಟಿಯ ಕಾನೂನುಬಾಹಿರ ಕ್ರಮವಾಗಿದೆ’ ಎಂದು ಆರೋಪಿಸಿದರು. 

ಇದನ್ನು ಅಲ್ಲಗಳೆದ ಪ್ರಾಸಿಕ್ಯೂಷನ್ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಈ ಪ್ರಕರಣದಲ್ಲಿ ಸರ್ಕಾರವನ್ನು ಕೇಂದ್ರವಾಗಿಸಿ ಆರೋಪ ಮಾಡುತ್ತಿರುವ ನಾಗೇಶ್‌ ಅವರ ವಾದ ತಕ್ಕುದಾದುದಲ್ಲ. ಸರ್ಕಾರ ಅಂತಹ ಯಾವುದೇ ದುರ್ಭಾವನೆಯಿಂದ ನಡೆದುಕೊಳ್ಳುತ್ತಿಲ್ಲ. ಆರೋಪಿ ಸಾಕ್ಷ್ಯ ನಾಶ ಮಾಡಬಹುದು ಎಂಬುದಷ್ಟೇ ತನಿಖಾಧಿಕಾರಿಗಳ ಆತಂಕ. ಇದಕ್ಕಾಗಿಯೇ ಸಮಯಾವಕಾಶ ನೀಡದೆ ವಿಚಾರಣೆ ನಡೆಸುವ ಇಚ್ಛೆ ಹೊಂದಿದೆ’ ಎಂದು ಸಮರ್ಥಿಸಿಕೊಂಡರು.

‘ಎರಡನೇ ನೋಟಿಸ್‌ ನೀಡಿದ ಕೂಡಲೇ ಆರೋಪಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ತನಿಖಾಧಿಕಾರಿಗೆ ಬಂಧಿಸುವ ಸ್ವಾತಂತ್ತ್ಯ ಇತ್ತಾದರೂ ಆರೋಪಿ ರಾಜ್ಯದಿಂದ ಆಚೆ ಹೋದಾಗ ವಾರಂಟ್‌ ಅವಶ್ಯಕತೆ ಎದುರಾಗುತ್ತದೆ ಎಂಬ ಕಾರಣಕ್ಕಾಗಿಯೇ ಕೋರ್ಟ್‌ನಿಂದ ವಾರಂಟ್‌ ಪಡೆಯಲು ತನಿಖಾಧಿಕಾರಿ ಮುಂದಾದರು. ಸಾಕ್ಷ್ಯಗಳ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಮಾತ್ರವೇ ವಾರಂಟ್‌ ಕೇಳಲು ಮುಂದಡಿ ಇರಿಸಿದರು’ ಎಂದು ವಿವರಿಸಿದರು.

ಸಂತ್ರಸ್ತ ಬಾಲಕಿಯ ಅಣ್ಣನ ಪರ ಹಾಜರಾಗಿದ್ದ ವಕೀಲ ಎಸ್.ಬಾಲನ್‌, ‘ದೂರು ದಾಖಲಾಗಿ ಮೂರು ತಿಂಗಳು ಕಳೆದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಇದೊಂದು ಗಂಭೀರ ಪ್ರಕರಣ. ಆದ್ದರಿಂದ, ಆರೋಪಿಯನ್ನು ಬಂಧಿಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತು ಸಂತ್ರಸ್ತ ಬಾಲಕಿಯ ಅಣ್ಣನಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದರು. ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ. ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್‌, ಸಿಐಡಿ ಎಡಿಜಿಪಿ  ಬಿಜಯ್‌ ಕುಮಾರ್ ಸಿಂಗ್‌ ಮತ್ತು ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ಹಾಜರಿದ್ದರು.

* ದೂರುದಾರರ ಸಮಗ್ರ ವಿವರ ಕೋರಿದ ನ್ಯಾಯಪೀಠ * ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶ * ವಿಚಾರಣೆ ಇದೇ 28ಕ್ಕೆ ಮುಂದೂಡಿಕೆ
ಆರೋಪಿ ಮಾಜಿ ಮುಖ್ಯಮಂತ್ರಿ. ಇಂತಹವರ ಬಗ್ಗೆ ತನಿಖೆ ನಡೆಸುವಾಗ ಪೊಲೀಸರ ನಡೆಯಲ್ಲಿ ಕೋರ್ಟ್‌ಗೆ ಸಂಶಯ ಬಾರದಂತೆ ಇರಬೇಕು. ಆರೋಪಿಯನ್ನು ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕೆಂಬ ನಿಮ್ಮ ಹಟ ಪ್ರಾಮಾಣಿಕತೆಯಿಂದ ಕೂಡಿಲ್ಲ
ಕೃಷ್ಣ ಎಸ್‌.ದೀಕ್ಷಿತ್‌ ನ್ಯಾಯಮೂರ್ತಿ
ಯಾರನ್ನು ಸಂತುಷ್ಟಗೊಳಿಸಲು ಬಂಧಿಸುತ್ತೀರಿ?
‘ಬಿ.ಎಸ್.ಯಡಿಯೂರಪ್ಪ ಯಾರೊ ಒಬ್ಬ ವೆಂಕ ನಾಣಿ ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಅವರಿಗೆ ತನುವಿನ ಅಡಚಣೆಗಳಿರುತ್ತವೆ. ಅಷ್ಟಕ್ಕೂ ನೀವು ಯಾರನ್ನು ಸಂತುಷ್ಟಗೊಳಿಸುವ ಸಲುವಾಗಿ ಬಂಧಿಸಲು ತವಕಿಸುತ್ತಿದ್ದೀರಿ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಪ್ರಾಸಿಕ್ಯೂಷನ್‌ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಅರ್ಜಿದಾರರು ಈಗಾಗಲೇ ಒಮ್ಮೆ ನೋಟಿಸ್‌ಗೆ ಪ್ರತಿಯಾಗಿ ಹಾಜರಾಗಿದ್ದಾರೆ. ಎರಡನೇ ನೋಟಿಸ್‌ಗೆ ಸಮಯ ಕೇಳಿದ್ದು ಬರುತ್ತೇನೆ ಎಂದು ಪತ್ರ ಬರೆದಿದ್ದಾರೆ. ಇದನ್ನು ನೀವು ಗೌರವಿಸಬೇಕು. ಅವರೇನೂ ತಪ್ಪಿಸಿಕೊಂಡು ಹೋಗುವ ವ್ಯಕ್ತಿಯಲ್ಲ. ಅಷ್ಟಕ್ಕೂ ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕಾದ ಅನಿವಾರ್ಯ ಆರೋಪದಲ್ಲಿ ಇದೆಯೇ? ಒಬ್ಬ ಮಾಜಿ ಮುಖ್ಯಮಂತ್ರಿಗೇ ಈ ರೀತಿಯ ಭೀತಿ ಸುತ್ತಿಕೊಂಡರೆ ಸಾಮಾನ್ಯರ ಗತಿಯೇನು? ದೂರುದಾರ ಮಹಿಳೆಯ ನಡೆಯ ಬಗ್ಗೆ ಸಮಗ್ರ ವಿವರ ಕೊಡಿ...’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆದರು. ಇದಕ್ಕೆ ಪ್ರತಿಯಾಗಿ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ‘ತನಿಖೆ ಪ್ರಗತಿಯಲ್ಲಿದೆ. ನ್ಯಾಯಪೀಠ ಕೇಳುತ್ತಿರುವ ವಿವರಗಳನ್ನೆಲ್ಲಾ ಲಿಖಿತ ಆಕ್ಷೇಪಣೆಯಲ್ಲಿ ಸಲ್ಲಿಸಲು ಸಮಯ ನೀಡಬೇಕು’ ಎಂದು ಮನವಿ ಮಾಡಿದರು.
‘ರಾಜಕೀಯ ಪ್ರತೀಕಾರದ ಕ್ರಮ‘  
‘ಯಡಿಯೂರಪ್ಪ ವಿರುದ್ಧ ದಾಖಲಿಸಿರುವ ಈ ಪ್ರಕರಣದ ಫಿರ್ಯಾದುದಾರ ಮಹಿಳೆ (ಈಗ ಬದುಕಿಲ್ಲ) ಸಮಾಜದಲ್ಲಿನ ಗಣ್ಯರ ವಿರುದ್ಧ ಇಂತಹುದೇ ದೂರುಗಳನ್ನು ನೀಡುವ ಚಾಳಿ ಹೊಂದಿದ್ದರು. ಅವರು ನೀಡಿದ ದೂರುಗಳ ಸಂಖ್ಯೆ ಒಟ್ಟು 53ರಷ್ಟಿದೆ. ಆಕೆಯ ಪ್ರವೃತ್ತಿ ಮತ್ತು ದೂರುಗಳು ಅಪ್ರಾಮಾಣಿಕತೆಯಿಂದ ಕೂಡಿವೆ. ಆದರೆ ಇದನ್ನೇ ನೆಪವಾಗಿರಿಸಿಕೊಂಡು ಆಡಳಿತಾರೂಢ ಸರ್ಕಾರ ರಾಜಕೀಯ ಪ್ರತೀಕಾರದ ಧೋರಣೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ’ ಎಂದು ವಕೀಲ ಸಿ.ವಿ.ನಾಗೇಶ್‌ ಆರೋಪಿಸಿದರು. ವಾದ ಮಂಡನೆ ವೇಳೆ ಈ ಕುರಿತು ಪ್ರಸ್ತಾಪಿಸಿದ ಅವರು ‘ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಆರೋಪಿಗಳಾಗಿರುವ ಸಂಸದ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಇದೇ ಕಾರಣಕ್ಕಾಗಿಯೇ ಬಿಜೆಪಿ ಮುಖಂಡರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಲ್ಲಿಯೂ ರಾಜ್ಯ ಸರ್ಕಾರ ಮುಯ್ಯಿ ತೀರಿಸಿಕೊಳ್ಳಲು ಮುಂದಾಗಿರುವಂತಿದೆ. ಇದಕ್ಕಾಗಿಯೇ ಕೋರ್ಟ್‌ನ ಆಸರೆ ಪಡೆದು ಯಡಿಯೂರಪ್ಪ ವಿರುದ್ಧ ವಾರಂಟ್ ಹೊರಡಿಸಿದೆ’ ಎಂದು ಬಲವಾಗಿ ಆಕ್ಷೇಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.