ADVERTISEMENT

ರಾಜ್ಯದ ಪ್ರಭಾವಿ ಸಚಿವರ ಒತ್ತಡ ಆರೋಪ: ಬೆಲ್ಲದ ಕಾರ್ಖಾನೆ ಮುಚ್ಚುವ ಆದೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 14:59 IST
Last Updated 20 ನವೆಂಬರ್ 2025, 14:59 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು: ‘ರಾಜ್ಯದ ಪ್ರಭಾವಿ ವೀರಶೈವ–ಲಿಂಗಾಯತ ಸಚಿವರೊಬ್ಬರ ಒತ್ತಡದ ಮೇರೆಗೆ ರಾಯಬಾಗ ತಾಲ್ಲೂಕಿನ ಹಾರೋಗೇರಿಯ ಮೆಸರ್ಸ್‌ ಶ್ರೀ ಬ್ರಹ್ಮಾನಂದ ಸಾಗರ ಬೆಲ್ಲದ ಕಾರ್ಖಾನೆಯ ಘಟಕವನ್ನು ಮುಚ್ಚಲು ನಿರ್ದೇಶಿಸಲಾಗಿದೆ’ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಕಾರ್ಖಾನೆ ಮುಚ್ಚಬೇಕೆಂಬ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ‘ಮೆಸರ್ಸ್‌ ಶ್ರೀ ಬ್ರಹ್ಮಾನಂದ ಸಾಗರ ಬೆಲ್ಲದ ಕಾರ್ಖಾನೆ‘ ಪಾಲುದಾರ ಮಹಾವೀರ ಜೆ.ಅಸ್ಕಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಅರ್ಜಿದಾರರು ಬೆಲ್ಲವನ್ನು ತಯಾರಿಸಲು ಪರವಾನಗಿ ಹೊಂದಿದ್ದರೂ, ಕಂದು ಸಕ್ಕರೆ ಉತ್ಪಾದಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ. ಹೀಗಾಗಿ, ಅರ್ಜಿದಾರರು ಏನು ತಯಾರಿಸುತ್ತಿದ್ದಾರೆ ಎಂಬುದರ ಒಗಟನ್ನು ಬಿಡಿಸಲು ಕೇಂದ್ರದ ಗ್ರಾಹಕ ವ್ಯಾಜ್ಯಗಳು ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಮುಖ್ಯ ನಿರ್ದೇಶಕರು ತಪಾಸಣೆ ನಡೆಸಬೇಕಾದ ಅಗತ್ಯವಿದೆ’ ಎಂದು ನ್ಯಾಯಪೀಠ ಆದೇಶಿಸಿದೆ.

‘ಅರ್ಜಿದಾರರು ಕಂದು ಸಕ್ಕರೆ ತಯಾರಿಸುತ್ತಿರುವುದು ಕಬ್ಬು ನಿಯಂತ್ರಣ ಆದೇಶದ ಉಲ್ಲಂಘನೆಯಾಗಿದೆ. ಆದ್ದರಿಂದ, ರಾಜ್ಯವು ಮಧ್ಯಪ್ರವೇಶಿಸಿ ಘಟಕವನ್ನು ಮುಚ್ಚುವತ್ತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ವಾದವನ್ನು ಗಮನಿಸಿದರೆ ಕಾರ್ಖಾನೆಯಲ್ಲಿ ಏನು ನಡೆಯುತ್ತಿದೆ ಮತ್ತು ಇದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯುವ ಜರೂರಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸಮೀಪದ ಅಳಗವಾಡಿ ಬೀರೇಶ್ವರ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ನಿರ್ದೇಶಕರು ರಾಜ್ಯ ಸರ್ಕಾರದಲ್ಲಿ ಹಾಲಿ ಪ್ರಭಾವಿ ಸಚಿವರೆನಿಸಿದ್ದಾರೆ. ಸಚಿವರ ಆಜ್ಞೆಯ ಮೇರೆಗೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಅರ್ಜಿದಾರರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ, ಕೇಂದ್ರದ ತಂಡ ತಪಾಸಣೆ ನಡೆಸುವಾಗ ರಾಜ್ಯ ಸರ್ಕಾರದ ಯಾವುದೇ ಅಧಿಕಾರಿಯು ತಪಾಸಣೆಯಲ್ಲಿ ಭಾಗಿಯಾಗಬಾರದು’ ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಕಟ್ಟಪ್ಪಣೆ ವಿಧಿಸಿದೆ.

‘ಕೇಂದ್ರ ಸಕ್ಕರೆ ಸಚಿವಾಲಯದ ಮುಖ್ಯ ನಿರ್ದೇಶಕರೊಂದಿಗೆ ಸಮನ್ವಯ ಸಾಧಿಸಿ ಇದೇ 28ಕ್ಕೆ ತಪಾಸಣೆ ನಡೆಸಬೇಕು’ ಎಂದು ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಅವರಿಗೆ ನಿರ್ದೇಶಿಸಿರುವ ನ್ಯಾಯಪೀಠ, ಡಿಸೆಂಬರ್ 9ಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಅನಿರುದ್ಧ ಕುಲಕರ್ಣಿ ಹಾಗೂ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಜೆ.ಎಂ.ಗಂಗಾಧರ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.