ADVERTISEMENT

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ‌.ಫಾರೂಕ್ ನಿಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 15:50 IST
Last Updated 21 ನವೆಂಬರ್ 2018, 15:50 IST
   

ಬೆಂಗಳೂರು:ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್ (75) ಬುಧವಾರ ಮುಂಜಾನೆ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.ಅಂತ್ಯಕ್ರಿಯೆ ಬುಧವಾರ (ನ. 21) ಸಂಜೆ 4.30ಕ್ಕೆ ಜಯಮಹಲ್‌ನಲ್ಲಿರುವ ಅಬ್ದುಲ್ ಖುದ್ದೂಸ್ ಕಬ್ರಸ್ಥಾನದಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1943ರ ಆಗಸ್ಟ್ 17ರಂದು ಜನಿಸಿದ ಫಾರೂಕ್ ಅವರು ಬೆಂಗಳೂರು ಮತ್ತು ಕಾಸರಗೋಡಿನಲ್ಲಿ ಶಿಕ್ಷಣ ಪಡೆದು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದ್ದರು‌.

ADVERTISEMENT

1968ರಲ್ಲಿ ವಕೀಲಿಕೆ ಪ್ರಾರಂಭಿಸಿದ ಅವರು ಕೆ.ಜಗನ್ನಾಥ ಶೆಟ್ಟಿ (ನಿವೃತ್ತ ನ್ಯಾಯಮೂರ್ತಿ) ಮತ್ತು ಎನ್. ಸಂತೋಷ್ ಹೆಗ್ಡೆ (ನಿವೃತ್ತ ಲೋಕಾಯುಕ್ತ) ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು.

1975ರಲ್ಲಿ ಹೈಕೋರ್ಟ್ ನಲ್ಲಿ ಸರ್ಕಾರಿ ವಕೀಲರಾದ ಅವರು 1995ರ ಡಿಸೆಂಬರ್ 18ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಫಾರೂಕ್ ಅವರ ಅಳಿಯ (ಮಗಳ ಗಂಡ) ಪುತ್ತೂರು ಮೊಹಮದ್ ನವಾಜ್ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ.

ಸಮಿತಿ ನೇತೃತ್ವ: ‘2004ರಿಂದ 2011ರ ಅವಧಿಯಲ್ಲಿ 308 ಜನಪ್ರತಿನಿಧಿಗಳು ಅಕ್ರಮವಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನ ಪಡೆದಿದ್ದಾರೆ’ ಎಂಬ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2015ರ ಫೆಬ್ರುವರಿ 3ರಂದು ಫಾರೂಕ್‌ ನೇತೃತ್ವದ ಸಮಿತಿಯನ್ನು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇಮಕ ಮಾಡಿತ್ತು.

ಜಿ.ಕೆಟಗರಿ ನಿವೇಶನ ಹಂಚಿಕೆ ಕುರಿತಂತೆ ದಿವಂಗತ ವಕೀಲ ಎಸ್‌. ವಾಸುದೇವ ಅವರು 2010ರಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.