ADVERTISEMENT

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 18:36 IST
Last Updated 10 ಏಪ್ರಿಲ್ 2022, 18:36 IST
ಮಾಧುಸ್ವಾಮಿ
ಮಾಧುಸ್ವಾಮಿ   

ಬೆಳಗಾವಿ/ವಿಜಯನಗರ: ಮುಸ್ಲಿಂ ವರ್ತಕರು ವ್ಯಾಪಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವ ಹಿಂದೂ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.

ಧಾರವಾಡದಲ್ಲಿ ಮುಸ್ಲಿಮರ ಅಂಗಡಿ ಧ್ವಂಸಗೊಳಿಸಿದ ಘಟನೆ ಬಗ್ಗೆ ಪ್ರಕ್ರಿಯಿಸಿದ ಅವರು, ‘ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವವರು ಅಥವಾ ಗಲಾಟೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುತ್ತೇವೆ. ದೇಶದಲ್ಲಿ ವ್ಯಾಪಾರ ಮಾಡಲು ಸಂವಿಧಾನಾತ್ಮಕವಾಗಿ ಎಲ್ಲರಿಗೂ ಹಕ್ಕಿದೆ. ಕಾನೂನು ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುವುದಿಲ್ಲ’ ಎಂದರು.

‘ಮುಸ್ಲಿಂ ವರ್ತಕರಿಗೆ ನಿರ್ಬಂಧಿಸುವುದಕ್ಕೆ ಸರ್ಕಾರದ ಬೆಂಬಲವಿಲ್ಲ. ಹಿಂದೂಪರ ಸಂಘಟನೆಗಳವರು ಏಕೆ ಮಾಡುತ್ತಿದ್ದಾರೆ? ಮಿತಿ ಮೀರಿದರೆ, ಕಾನೂನು ಕೈಗೆತ್ತಿಕೊಂಡರೆ, ಸರ್ಕಾರ ಕ್ರಮ ವಹಿಸಿಯೇ ತೀರುತ್ತದೆ. ಇದರಲ್ಲಿ ಎರಡು ಮಾತಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಮಾಧುಸ್ವಾಮಿಯೊಂದಿಗೆ ಮಾತನಾಡುವೆ: ಮುಖ್ಯಮಂತ್ರಿ ಬೊಮ್ಮಾಯಿ

‘ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕೊಟ್ಟಿರುವ ಹೇಳಿಕೆ ಗಮನಿಸಿಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಹೇಳಿದರೆಂದುಗೊತ್ತಿಲ್ಲ. ಅವರೊಂದಿಗೆ ಮಾತನಾಡುವೆ. ಎಲ್ಲರೂ ಸಾಮರಸ್ಯದಿಂದ ಇದ್ದರೆ ಅಭಿವೃದ್ಧಿ ಸಾಧ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.

ಸಂಜೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ‘ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದೆಲ್ಲ ಹೇಳಿರುವೆನೆಂದು ಖಾಸಗಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದೆ ಎಂದು ಗೊತ್ತಾಗಿದೆ. ಸರ್ಕಾರದಲ್ಲಿದ್ದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಯಾವತ್ತೂ ಉದ್ಭವವಾಗಿಲ್ಲ. ಆ ರೀತಿ ಮಾತಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಣಹೇಡಿಗಳು: ಹರಿಪ್ರಸಾದ್

‘ಸರ್ಕಾರದ ಕುಮ್ಮಕ್ಕಿನಿಂದಾಗಿ ರಾಜ್ಯದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದ್ದು ‘ಧಾರವಾಡದಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ಬಡ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ಮಾಡಿದ್ದಾರಲ್ಲಾ, ಅವರಷ್ಟು ರಣಹೇಡಿಗಳು ಯಾರೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.