ADVERTISEMENT

13 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಣೆ

ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:54 IST
Last Updated 16 ನವೆಂಬರ್ 2021, 4:54 IST

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನ.16ರಿಂದ 18ರವರೆಗೆ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂಡಮಾನ್‌ ಭಾಗದಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳು ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸೂಚನೆ ಇದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ADVERTISEMENT

ಕರಾವಳಿಯಲ್ಲಿ ಗಂಟೆಗೆ 50ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಇದೇ 18ರವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಸೂಚಿಸಿದೆ.

ಮಳೆ–ಎಲ್ಲಿ, ಎಷ್ಟು?: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಸೋಮವಾರ 19 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಅರಸಾಳು 14, ಮೂಡುಬಿದರೆ 13, ಕಾರ್ಕಳ 10, ಭದ್ರಾವತಿ 9, ಶಿವಮೊಗ್ಗ, ಕೊಪ್ಪ 8, ಶಿಕಾರಿಪುರ 7, ತರೀಕೆರೆ 6, ಮಂಗಳೂರು 5, ಪುತ್ತೂರು, ಸಾಗರ, ಹೊಸಕೋಟೆ 4, ಭಟ್ಕಳ, ಗುಬ್ಬಿ, ದೊಡ್ಡಬಳ್ಳಾಪುರ, ಚಿತ್ರದುರ್ಗ, ತೀರ್ಥಹಳ್ಳಿ 3, ಮಾಲೂರು, ನೆಲಮಂಗಲ, ಹಾಸನ 2, ಪಾವಗಡ, ತಿಪಟೂರು, ಚನ್ನರಾಯ‍ಪಟ್ಟಣ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಳ್ಳಕೆರೆ, ರಾಮನಗರ, ಮಡಿಕೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ದಾವಣಗೆರೆಯಲ್ಲಿ ಸೋಮವಾರ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.