ಬಿ.ವೈ.ವಿಜಯೇಂದ್ರ
ಬೆಂಗಳೂರು: ಪರಿಶಿಷ್ಟ ಸಮುದಾಯಗಳ ಬಗ್ಗೆ ತನಗಿರುವುದು ಬದ್ಧತೆಯ ಕಾಳಜಿಯಲ್ಲ, ಅದು ‘ಮೊಸಳೆ ಕಣ್ಣೀರು’ಎನ್ನುವುದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೋರಿಸಿ ಕೊಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಒಳ ಮೀಸಲಾತಿ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದರೂ ಅದಕ್ಕೆ ಪೂರವಾಗಿ ಜಾತಿ ಪ್ರಮಾಣಪತ್ರ ವಿತರಿಸಲು ಅಗತ್ಯವಾದ 'ತಂತ್ರಾಂಶ'ವನ್ನು ರಾಜ್ಯ ಸರ್ಕಾರ ಇನ್ನೂ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಸರ್ಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಾಧಿಕಾರಗಳು ಅಧಿಸೂಚನೆ ಹೊರಡಿಸಲು ತೊಡಕಾಗಿದೆ. ಈ ಸಂಬಂಧ ಪ್ರಜಾವಾಣಿ ವರದಿ ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಈಗಲೂ ಗೊಂದಲಗಳ ಗೂಡು ಕಟ್ಟಿಕೊಂಡಿರುವ ಸರ್ಕಾರ ಸದ್ಯ ಹೊರಡಿಸಿರುವ ಆದೇಶದ ಅನ್ವಯ ಅಗತ್ಯ ತಂತ್ರಾಂಶವನ್ನೇ ಅಭಿವೃದ್ಧಿಪಡಿಸದೆ ಉಡಾಫೆ ಧೋರಣೆ ಪ್ರದರ್ಶಿಸಿದೆ, ಇದರ ಪರಿಣಾಮ ಸರ್ಕಾರಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಭಿಸಲಾಗಿಲ್ಲ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಬೇಕಿರುವ MD ಸೀಟು ಹಂಚಿಕೆಗೆ ಅರ್ಜಿಸಲ್ಲಿಸಲು ತೊಡಕಾಗಿದ್ದು, ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಒಳ ಮೀಸಲಾತಿ ಅನ್ವಯ ಸವಲತ್ತು ಪಡೆಯಲು ಅನಗತ್ಯ ವಿಳಂಬ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ನಿದ್ರೆಯಿಂದ ಎದ್ದು ಈ ಕೂಡಲೇ ತಂತ್ರಾಂಶ ಅಭಿವೃದ್ಧಿಪಡಿಸಿ ಸುಲಲಿತವಾಗಿ ಸೀಟು ಹಂಚಿಕೆ ಹಾಗೂ ಸರ್ಕಾರಿ ಹುದ್ದೆಗಳು ಭರ್ತಿಯಾಗಲು ಅಗತ್ಯ ತುರ್ತು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.