ಬೆಂಗಳೂರು: ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಲಸಿಕೆ ಪಡೆದಿದ್ದರೂ ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಪಡೆದುಕೊಂಡಿದೆ. ರಾಜ್ಯ ಪ್ರವೇಶಿಸುವವರಿಗೆ ಗಡಿಯಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವಿದ್ದರೂ ಸದ್ಯ ಅವಕಾಶ ನೀಡಲಾಗುತ್ತಿತ್ತು. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹಾಗೂ ಲಸಿಕಾ ಪ್ರಮಾಣ ಪತ್ರ ಹೊಂದಿರದವರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ರಾಜ್ಯದಲ್ಲಿಯೂ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಳ್ಳುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದರು. ಹೀಗಾಗಿ, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ ಸೋಂಕು ಇಲ್ಲ ಎಂಬುದನ್ನು ದೃಢಪಡಿಸುವ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅದು 72 ಗಂಟೆಗಳು ಮೀರಿರಬಾರದು ಎಂದು ತಿಳಿಸಲಾಗಿದೆ.
ವಿಮಾನ, ರೈಲು ಹಾಗೂ ರಸ್ತೆ ಮಾರ್ಗದಲ್ಲಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಕೇರಳ ಹಾಗೂ ಮಹಾರಾಷ್ಟ್ರದಿಂದ ಹೊರಡುವ ಎಲ್ಲ ವಿಮಾನಗಳಿಗೂ ನಿಯಮ ಅನ್ವಯವಾಗುತ್ತದೆ. ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ವಿಮಾನಯಾನ ಸಂಸ್ಥೆಯವರು ಬೋರ್ಡಿಗ್ ಪಾಸ್ ನೀಡಬೇಕುಎಂದು ಸುತ್ತೋಲೆಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ: ರೈಲಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಪರೀಕ್ಷಾ ವರದಿಯನ್ನು ಹೊಂದಿರುವ ಬಗ್ಗೆ ರೈಲ್ವೆ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು. ಬಸ್‌ಗಳಲ್ಲಿ ನಿರ್ವಾಹಕರು ಪರಿಶೀಲಿಸಬೇಕು. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು ಹಾಗೂ ಮೈಸೂರು ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ, ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಇದು ಜಿಲ್ಲಾಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಲಾಗಿದೆ.
ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ–ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ದೈನಂದಿನ ಭೇಟಿ ನೀಡುವವರು ಪ್ರತಿ 15 ದಿನಗಳಿಗೆ ಒಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಲಾಗಿದೆ.
ತುರ್ತು ಸಂದರ್ಭದಲ್ಲಿ ವಿನಾಯಿತಿ
ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಸಾಂವಿಧಾನಿಕ ಕಾರ್ಯಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಎರಡು ವರ್ಷದೊಳಗಿನ ಮಕ್ಕಳಿಗೆ ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿಯ ವಿನಾಯಿತಿ ನೀಡಲಾಗಿದೆ.
ಕುಟುಂಬದಲ್ಲಿ ಮರಣ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ತುರ್ತು ಸಂದರ್ಭದಲ್ಲಿ ಆಗಮಿಸುವ ಪ್ರಯಾಣಿಕರು ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿರದಿದ್ದರೂ ಬರಲು ಅವಕಾಶ ನೀಡಲಾಗಿದೆ. ಅಂತಹವರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಬೇಕು. ಅವರ ವಿಳಾಸ, ಸಂಪರ್ಕ ಸಂಖ್ಯೆ ಸೇರಿದಂತೆ ವಿವಿಧ ವಿವರವನ್ನು ಪಡೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.