ADVERTISEMENT

ಒಳ ಮೀಸಲು: ನೇಮಕಕ್ಕೆ ಒ‍ಪ್ಪಿಗೆ; ಆದೇಶಕ್ಕೆ ತಡೆ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 15:44 IST
Last Updated 18 ಅಕ್ಟೋಬರ್ 2025, 15:44 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ 2025ರ ಆಗಸ್ಟ್‌ 25ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ‘ನೇಮಕಾತಿ ಪ್ರಕ್ರಿಯೆ ನಡೆಸಬಹುದು. ಆದರೆ, ನೇಮಕಾತಿ ಆದೇಶ ಹೊರಡಿಸುವಂತಿಲ್ಲ’ ಎಂದು ಹೈಕೋರ್ಟ್‌ ಆದೇಶಿಸಿದೆ.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ‘ಕರ್ನಾಟಕ ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಮತ್ತಿತರರು’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ್‌ ಅವರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.

ADVERTISEMENT

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ಆಯೋಗ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ಎ, ಬಿ, ಸಿ, ಡಿ ಮತ್ತು ಇ ಎಂದು ಐದು ಗುಂಪುಗಳಾಗಿ ವರ್ಗೀಕರಿಸಿ ಕ್ರಮವಾಗಿ ಶೇ 1,6,5,4,1 ರಂತೆ ಮೀಸಲು ಹಂಚಿ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದನ್ನು ಮಾರ್ಪಾಡು ಮಾಡಿದ್ದ ಸರ್ಕಾರ, ಐದು ಗುಂಪುಗಳ ಬದಲಾಗಿ ಪ್ರವರ್ಗ ಎ, ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಎಂದು ಮೂರು ಗುಂಪುಗಳನ್ನಾಗಿ ಮಾಡಿ ಶೇ 6, 6, 5 ರಂತೆ ಒಳಮೀಸಲಾತಿ ನಿಗದಿಪಡಿಸಿ ಆಗಸ್ಟ್‌ 25ರಂದು ಆದೇಶ ಹೊರಡಿಸಿತ್ತು.

ಆಯೋಗವು 59 ಅಸ್ಪೃಶ್ಯ ಅಲೆಮಾರಿ, ಅರೆ-ಅಲೆಮಾರಿ ಮತ್ತು ಅತಿ ಸೂಕ್ಷ್ಮ ಜಾತಿಗಳನ್ನು ಅತ್ಯಂತ ಹಿಂದುಳಿದವರು ಎಂದು ಪರಿಗಣಿಸಿ ಪ್ರತ್ಯೇಕ ಗುಂಪಾಗಿ ‘ಪ್ರವರ್ಗ ಎ’ ಅಡಿ ಶೇ 1ರಷ್ಟು ಒಳ ಮೀಸಲಾತಿ ಕಲ್ಪಿಸಿತ್ತು. ಆದರೆ, ಸರ್ಕಾರವು ಈ ಜಾತಿಗಳನ್ನು ಭೋವಿ, ಲಂಬಾಣಿ, ಕೊರಮ ಮತ್ತು ಕೊರಚ ಜಾತಿಗಳೊಂದಿಗೆ ‘ಪ್ರವರ್ಗ ಸಿ’ ಅಡಿ ಸೇರಿಸಿ ಶೇ 5ರಷ್ಟು ಒಳ ಮೀಸಲಾತಿ ಕಲ್ಪಿಸಿದೆ. ಸರ್ಕಾರದ ಈ ನೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.