ಬೆಂಗಳೂರು: ರಾಜ್ಯದಲ್ಲಿರುವ ಕೆರೆಗಳಿಗೆ ಏಕರೂಪದಲ್ಲಿದ್ದ 30 ಮೀಟರ್ ‘ಸಂರಕ್ಷಿತ ಪ್ರದೇಶ’ವನ್ನು (ಬಫರ್ ಝೋನ್) ಕಡಿತಗೊಳಿಸುವ ಜೊತೆಗೆ, ಆ ಪ್ರದೇಶದಲ್ಲಿ ನಾಗರಿಕರಿಗೆ ಅನುಕೂಲವಾಗುವ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರಲ್ಲಿ ಕೆರೆಗಳ ‘ಬಫರ್ ಝೋನ್’ ಅನ್ನು 75 ಮೀಟರ್ ಮತ್ತು ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ರಾಜಕಾಲುವೆಗಳ ‘ಬಫರ್ ಝೋನ್’ ಅನ್ನು ಕ್ರಮವಾಗಿ 50 ಮೀ., 35 ಮೀ. ಹಾಗೂ 25 ಮೀ.ಗೆ ನಿಗದಿಪಡಿಸಿ ಆದೇಶಿಸಿತ್ತು. ಈ ಆದೇಶವನ್ನು ತಡೆಹಿಡಿದ ಸುಪ್ರೀಂ ಕೋರ್ಟ್ 2019ರಲ್ಲಿ ಆದೇಶ ಹೊರಡಿಸಿ, ಕರ್ನಾಟಕ ಮುನಿಸಿಪಲ್ ಕಾಯ್ದೆ–1976, ಮಾಸ್ಟರ್ ಪ್ಲಾನ್ ಬೆಂಗಳೂರು–2015, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ (ಕೆಟಿಸಿಡಿಎ)–2014ರಂತೆ ಕೆರೆಗಳ ಬಫರ್ ಝೋನ್ ನಿಗದಿ ಮಾಡಬೇಕು ಎಂದು ತಿಳಿಸಿತು.
ಕೆಟಿಸಿಡಿಎ ಕಾಯ್ದೆಯಲ್ಲಿ ಕೆರೆಗಳ ‘ಬಫರ್ ಝೋನ್’ 30 ಮೀಟರ್ ಎಂದು ನಮೂದಿಸಲಾಗಿದೆ. ಇದರಂತೆ ಈವರೆಗೂ ಪಾಲನೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ, ಹಲವು ಪ್ರದೇಶಗಳಲ್ಲಿ ಇದು ತಕರಾರಿನಲ್ಲಿದ್ದು, ಸಂಪೂರ್ಣ ಅನುಷ್ಠಾನವಾಗಿರಲಿಲ್ಲ. ಅದನ್ನು ಸರಿಪಡಿಸಲು, ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾಲಿಸಲಾಗುತ್ತಿರುವ ‘ಬಫರ್ ಝೋನ್’ ನಿಯಮಗಳನ್ನು ಸಮಿತಿ ಅಧ್ಯಯನ ಮಾಡಿತು.
‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಐದು ಗುಂಟೆ ಅಥವಾ ಒಂದು ಎಕರೆಗೂ ಕಡಿಮೆ ವಿಸ್ತೀರ್ಣದಲ್ಲಿ ಕೆರೆ–ಕುಂಟೆಗಳಿವೆ. ಅವುಗಳಿಗೂ 30 ಮೀಟರ್ ‘ಬಫರ್ ಝೋನ್’ ಬಿಟ್ಟರೆ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ಸಮಿತಿ ನಿರ್ಧರಿಸಿತು. ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಬಫರ್ ಝೋನ್’ ನಿಗದಿಪಡಿಸಿ, ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಮಿತಿಯ ವರದಿ ಸಚಿವ ಸಂಪುಟದಲ್ಲಿ ಚರ್ಚಿಸಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ (ಕೆಟಿಸಿಡಿಎ) –2014ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ನಿರ್ಧರಿಸಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುತ್ತದೆ.
ಎಸ್‌ಟಿಪಿ ‘ಕೆರೆಗಳಿಗೆ ಒಳಚರಂಡಿ ನೀರು ಹರಿಯದಂತೆ ಮಾಡಬೇಕಾದರೆ ಅದಕ್ಕೆ ಪ್ರತ್ಯೇಕವಾಗಿ ಹೊರಭಾಗದಲ್ಲೇ ಪೈಪ್‌ಲೈನ್ ಅಳವಡಿಸಬೇಕು. ಆದರೆ ‘ಬಫರ್ ಝೋನ್’ನಲ್ಲಿ ಯಾವುದೇ ಕಾಮಗಾರಿ ನಡೆಸಲು ಕೆಟಿಸಿಡಿಎ ಕಾಯ್ದೆಯಲ್ಲಿ ನಿರ್ಬಂಧವಿದೆ. ಹೀಗಾಗಿ ಬಫರ್ ಝೋನ್‌ನಲ್ಲಿ ನಾಗರಿಕರಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ಕೆರೆಯ ಯಾವುದೇ ಪ್ರದೇಶ ಒಳಹರಿವು ಹಾಗೂ ಹೊರಹರಿವಿಗೆ ಧಕ್ಕೆಯಾಗದಂತೆ ನಿರ್ವಹಿಸಲು ಕಾಯ್ದೆಯಲ್ಲಿ ಅವಕಾಶ ಮಾಡಲು ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಒಳಚರಂಡಿ ಮಾರ್ಗ ಮ್ಯಾನ್‌ಹೋಲ್‌ಗಳನ್ನು ಬಫರ್ ಝೋನ್‌ಗಳಲ್ಲಿ ನಿರ್ಮಿಸಬಹುದಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಕೆರೆಗಳಿಗೆ ಸಂಸ್ಕರಿಸಿದ ನೀರನ್ನೇ ಹರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದ್ದು ಇದನ್ನು ಪಾಲಿಸಲು ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವುದು ಅನಿವಾರ್ಯ. ಆದರೆ ಎಸ್‌ಟಿಪಿಗಾಗಿ ಕೆರೆ ಅಂಗಳವನ್ನು ಬಳಸಿಕೊಳ್ಳುವಂತಿಲ್ಲ. ಖಾಸಗಿ ಜಮೀನು ಪಡೆದುಕೊಳ್ಳುವುದು ಕಷ್ಟ. ಹೀಗಾಗಿ ‘ಬಫರ್ ಝೋನ್’ನಲ್ಲಿ ಎಸ್‌ಟಿಪಿಗಳನ್ನು ಅಳವಡಿಸಲೂ ಕಾಯ್ದೆಯಲ್ಲಿ ಅವಕಾಶ ಸಿಗಲಿದೆ’ ಎಂದರು.
‘ರಿಯಲ್ ಎಸ್ಟೇಟ್ ಹೇಳುವಂತೆಯೇ ಎಲ್ಲವನ್ನೂ ಮಾಡುವ ಸರ್ಕಾರ ಎಲ್ಲ ಕೆರೆಗಳನ್ನು ಮುಚ್ಚಿಬಿಡಲಿ. ಪರಿಸರ ನಾಗರಿಕರ ಹಿತಾಸಕ್ತಿಯನ್ನು ಮರೆತುಬಿಡಲಿ. ಯಾರು ಈ ಸರ್ಕಾರಕ್ಕೆ ಸಲಹೆ ನೀಡುತ್ತಾರೋ ಗೊತ್ತಿಲ್ಲ? ಇದು ಕ್ರಿಮಿನಲ್‌ಗಳು ಮಾಡುವಂತಹ ದೊಡ್ಡ ಅಪರಾಧ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿಲ್ಲಿಸಿದರೆ ಸಾಲದು ಅವರು ಕಟ್ಟಿದ ಕೆರೆಗಳನ್ನು ಮುಚ್ಚಲು ಹೊರಟರೆ ನಿಮ್ಮ ನಿಲುವಿನಲ್ಲಿರುವ ಅರ್ಥವೇನು? ಬಫರ್ ಝೋನ್‌ನಲ್ಲಿ ಎಸ್‌ಟಿಪಿ ಮಾಡಿದರೆ ಅಲ್ಲಿನ ಗತಿಯೇನು? ಅಂತರ್ಜಲ ಮಲಿನ ಹೆಚ್ಚಾಗುತ್ತದೆ. ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡು ‘ಬಫರ್ ಝೋನ್’ ಅನ್ನು ಉಳಿಸಬೇಕು’ ಎಂದು ಪರಿಸರ ತಜ್ಞ ಅ.ನ. ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.