ಬೆಂಗಳೂರು: ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿನ ಪ್ರಮುಖ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯ ಮುಂದಿನ ವರ್ಷದ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಗೆ ಮಂಗಳವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡನೇ ಹಂತದಲ್ಲಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಇರುವ ಒಂದು ಕೋಟಿ ಪುಟಗಳಷ್ಟು ದಾಖಲೆಗಳನ್ನು ಗಣಕೀಕರಣಗೊಳಿಸಲಾಗುವುದು’ ಎಂದರು.
ಹಳೆಯ ದಾಖಲೆಗಳು ಶಿಥಿಲ ಆಗದಂತೆ ತಡೆಯುವುದು ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದೆ ಜನರಿಗೆ ಸುಲಭವಾಗಿ ದಾಖಲೆಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಮನೆಯಿಂದಲೇ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಪಡೆಯಬಹುದು. ಒಂದು ವೇಳೆ ಈ ಕುರಿತ ತಾಂತ್ರಿಕ ಜ್ಞಾನ ಇಲ್ಲದಿದ್ದರೆ, ಜನರು ನಾಡ ಕಚೇರಿಗಳಿಗೆ ಹೋಗಬಹುದು. ಕೇಂದ್ರ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ಯೋಜನೆ ಪೂರ್ಣಗೊಳ್ಳುವವರೆಗೂ ದಾಖಲೆಗಳಿಗಾಗಿ ಕಾಯಬೇಕಾಗಿಲ್ಲ. ಭೂ ಸುರಕ್ಷಾ ಯೋಜನೆಯಡಿ ಅರ್ಜಿ ಹಾಕಿದರೆ, ಗ್ರಾಹಕರು ಕೇಳಿದ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ನೀಡಲಾಗುತ್ತದೆ. ಡಿಜಿಟಲೀಕರಣದಿಂದ ದಾಖಲೆಗಳನ್ನು ತಿದ್ದುವುದು, ಕಳೆದು ಹೋಗಿವೆ ಎಂದು ಸುಳ್ಳು ಹೇಳುವ ಪರಿಪಾಟಕ್ಕೆ ಕಡಿವಾಣ ಬೀಳಲಿದೆ. ಮಧ್ಯವರ್ತಿಗಳ ಹಾವಳಿ, ಶೋಷಣೆ ತಪ್ಪಲಿದೆ ಎಂದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಉಪಸ್ಥಿತರಿದ್ದರು.
* ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ
* ಆನ್‌ಲೈನ್‌ನಲ್ಲೇ ದಾಖಲೆಗಳ ಪಡೆಯಲು ಅವಕಾಶ
* ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ವೇಗ
‘ಭೂ ಮಾಫಿಯಾಗೆ ಕಡಿವಾಣ’ ‘ಆಸ್ತಿಗಳ ಲೂಟಿ ಮಾಡಲು ಬೆಂಗಳೂರು ಸುತ್ತಮುತ್ತ ಈ ಹಿಂದೆ ಅನೇಕ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಇಲಾಖೆಯ ಅಧಿಕಾರಿಗಳ ಕೈವಾಡವೂ ಇದೆ. ಇಂತಹ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲೂ ಹಿನ್ನಡೆಯಾಗಿದೆ. ಆದರೆ ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲೂ ಹೋರಾಟ ಮಾಡುತ್ತೇವೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು. ‘ನಾವು ಕೈ ಕಟ್ಟಿಕೊಂಡು ಸುಮ್ಮನಿರುವುದಿಲ್ಲ. ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ಬಂದರೆ ಅವುಗಳ ನೈಜತೆ ಬಗ್ಗೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸುತ್ತೇವೆ. ದಾಖಲೆಗಳು ನಕಲಿ ಎಂದು ಗೊತ್ತಾದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.