
ವಿಧಾನಸೌಧ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ನಸೀರ್ ಅಹ್ಮದ್ ಆಡಿದ ಮಾತೊಂದು ವಿಧಾನ ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿತು.
‘ನಸೀರ್ ಅಹ್ಮದ್ ಅವರು ಹೇಳಿದ ಮಾತನ್ನು ಕಡತದಿಂದ ತೆಗೆದು ಹಾಕಿದ್ದೇನೆ. ತಪ್ಪಾಗಿ ಮಾತನಾಡಿರುವ ಬಗ್ಗೆ ಏನು ಹೇಳುತ್ತಾರೋ ಅವರಿಗೆ ಬಿಟ್ಟದ್ದು, ನನಗೇನು ಮಾಡಕಾಗುವುದಿಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ‘ಕ್ಷಮಾಪಣೆ ಕೇಳಲೇಬೇಕು’ ಎಂದು ಪಟ್ಟು ಹಿಡಿದ ಬಿಜೆಪಿ ಸದಸ್ಯರು ಧರಣಿ ನಡೆಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ವಿಧಾನ ಪರಿಷತ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ, ‘ವಿಬಿ ಜಿ ರಾಮ್ ಜಿ ಕಾಯ್ದೆ ಪ್ರಕಾರ ರಾಜ್ಯ ಶೇ 40ರಷ್ಟು ಕೊಡಬೇಕು. ಕೇಂದ್ರ ಶೇ 60ರಷ್ಟು ನೀಡುತ್ತದೆ. ಇದರ ಅರ್ಥ ಏನು. ರಾಜ್ಯದಲ್ಲಿ ದುಡ್ಡಿಲ್ಲ ಎಂದು ಈ ರೀತಿ ಹೇಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಆಗ ಕಾಂಗ್ರೆಸ್‌ನ ನಾಗರಾಜ ಯಾದವ್ ಅವರು ‘ಕೇಂದ್ರ ದಿವಾಳಿ ಆಗಿದೆ ಸರ್’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಭಾರತಿ ಶೆಟ್ಟಿ, ‘ಅದಕ್ಕೆ ಆರ್ಥಿಕ ಸ್ಥಿತಿಯಲ್ಲಿ ದೇಶ ನಾಲ್ಕನೇ ಸ್ಥಾನದಲ್ಲಿದೆ’ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಹೆಚ್ಚಾಯಿತು. ‘ಪಾಕಿಸ್ತಾನ, ಬಾಂಗ್ಲಾಕ್ಕೆ ಜೈ ಹಾಕಿದಂತಲ್ಲ’ ಎಂದು ಭಾರತಿ ಶೆಟ್ಟಿ ಅವರು ನಸೀರ್ ಅಹ್ಮದ್ ಉದ್ದೇಶಿಸಿ ಹೇಳಿದರು. ಆಗ ನಸೀರ್ ಅವರು ಬಳಸಿದ ಪದ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು.
‘ನಸೀರ್ ಅಹ್ಮದ್ ಅವರು ಕ್ಷಮೆ ಕೇಳಬೇಕು, ಅವರು ದೇಶದ ಪ್ರಧಾನಿ ಅವರನ್ನು ‘ದೇಶದ್ರೋಹಿ’ ಎಂದಿದ್ದಾರೆ. ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಅವರನ್ನು ಅಮಾನತು ಮಾಡಬೇಕು’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಭಾರತಿ ಶೆಟ್ಟಿ, ಎನ್. ರವಿಕುಮಾರ್, ಸಿ.ಟಿ. ರವಿ ಅವರು ಸೇರಿದಂತೆ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಉತ್ತರ ನೀಡುವುದನ್ನು ನಿಲ್ಲಿಸಿದರು. ಸಭಾಪತಿಯವರು ‘ನಸೀರ್ ಮಾತನ್ನು ಕಡತದಿಂದ ತೆಗೆದುಹಾಕಲಾಗಿದೆ’ ಎಂದರು. ಬಿಜೆಪಿ, ಕಾಂಗ್ರೆಸ್ ಸದಸ್ಯರು ಪರಸ್ಪರ ಧಿಕ್ಕಾರ ಕೂಗಿಕೊಂಡರು. ಆಗ, ಸಭಾಪತಿಯವರು ‘ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿ, ಅಂಗೀಕಾರವಾಗಿದೆ’ ಎಂದು ಘೋಷಿಸಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.