ADVERTISEMENT

ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ: ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಪಟ್ಟು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
<div class="paragraphs"><p>ಬಿಜೆಪಿ, ಕಾಂಗ್ರೆಸ್</p></div>

ಬಿಜೆಪಿ, ಕಾಂಗ್ರೆಸ್

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದ ಮಸೂದೆ ಹಿಂಪಡೆಯಬೇಕು, ತನ್ನ ಬಜೆಟ್‌ನಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಅನುದಾನ ಮೀಸಲಿರಿಸಬೇಕು ಮತ್ತು ಯುಜಿಸಿ ನಿಯಮಾವಳಿಗಳಿಗೆ ತರಲು ಹೊರಟಿರುವ ತಿದ್ದುಪಡಿಯನ್ನು ಕೈಬಿಡಬೇಕು ಎಂಬ ರಾಜ್ಯ ಸರ್ಕಾರದ ಮೂರು ನಿರ್ಣಯಗಳ ಮೇಲೆ ಚರ್ಚೆ ನಡೆಯಬೇಕು ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

ADVERTISEMENT

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಕಲಾಪದ ವೇಳೆ ಯುಜಿಸಿ ಕರಡು ತಿದ್ದುಪಡಿ ನಿಯಮಾವಳಿಯ ವಿರುದ್ಧ ನಿರ್ಣಯ ಮಂಡಿಸಿದರು. ‘ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ’ ಎಂದು ನಿರ್ಣಯವನ್ನು ಓದಿದರು.

ತಕ್ಷಣವೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಪ್ರತಾಪ್‌ ಸಿಂಹ್ ನಾಯಕ್, ‘ಇದರ ಬಗ್ಗೆ ಚರ್ಚೆಯೇ ಆಗಿಲ್ಲ. ನಮ್ಮ ಒಪ್ಪಿಗೆಯೇ ಇಲ್ಲ. ಹೀಗಿದ್ದಾಗ ಸರ್ವಾನುಮತ ಎಂದು ಹೇಗೆ ಹೇಳುತ್ತೀರಿ’ ಎಂದು ಪ್ರಶ್ನಿಸಿದರು. ಅವರಿಗೆ ಬೆಂಬಲ ಸೂಚಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸ್ವಾಮಿ ಈ ನಿರ್ಣಯಗಳಿಗೆ ನಮ್ಮ ವಿರೋಧವಿದೆ. ಇದರ ಬಗ್ಗೆ ಚರ್ಚೆ ನಡೆಯಬೇಕು. ಸರ್ವಾನುಮತ ಎಂಬುದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಕೆ.ಎಸ್‌.ನವೀನ್‌, ‘ಕೇಂದ್ರ ಸರ್ಕಾರ ಮಾಡಿದ್ದಕ್ಕೆಲ್ಲವನ್ನೂ ವಿರೋಧಿಸಬೇಕು ಎಂಬ ಉದ್ದೇಶ ಬಿಟ್ಟು, ಈ ನಿರ್ಣಯಗಳಲ್ಲಿ ಏನೂ ಇಲ್ಲ’ ಎಂದರು.

ಆಗ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ‘ಈಗ ಮೂರು ನಿರ್ಣಯಗಳನ್ನೂ ಮಂಡಿಸುತ್ತೇವೆ. ನಾಳೆ ಅದನ್ನು ಚರ್ಚೆಗೆ ಎತ್ತಿಕೊಳ್ಳೋಣ. ವಿರೋಧ ಪಕ್ಷಗಳ ಸಲಹೆಗಳ ಪ್ರಕಾರ ನಿರ್ಣಯಗಳನ್ನು ಪರಿಷ್ಕರಿಸೋಣ’ ಎಂದರು.

ಸಭಾಪತಿ ಪೀಠದಲ್ಲಿದ್ದ ಭಾರತಿ ಶೆಟ್ಟಿ ಅವರು, ‘ಚರ್ಚೆಗೆ ಎತ್ತಿಕೊಳ್ಳೋಣ ಎಂದಿದ್ದಾರೆ’ ಎಂದು ಉಳಿದ ಎರಡು ನಿರ್ಣಯಗಳ ಮಂಡನೆಗೆ ಅವಕಾಶ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.