ADVERTISEMENT

ವಿಧಾನ ಪರಿಷತ್ತು | ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ: ಭರಪೂರ ವಾದ–ಪ್ರತಿವಾದ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:40 IST
Last Updated 30 ಜನವರಿ 2026, 15:40 IST
<div class="paragraphs"><p>ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್‌.ಎಸ್‌.ಬೋಸರಾಜು ಮಧ್ಯೆ ಚರ್ಚೆಯ ಕ್ಷಣ</p></div>

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್‌.ಎಸ್‌.ಬೋಸರಾಜು ಮಧ್ಯೆ ಚರ್ಚೆಯ ಕ್ಷಣ

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಯಾವುದೇ ಚರ್ಚೆ ನಡೆಯದೆ ಎರಡು ದಿನಗಳ ಕಲಾಪ ಮುಗಿಸಿದ್ದ ವಿಧಾನ ಪರಿಷತ್ತು ಶುಕ್ರವಾರ ರಾಜ್ಯಪಾಲರ ಕರ್ತವ್ಯ, ಒಕ್ಕೂಟ ವ್ಯವಸ್ಥೆ, ಹಣಕಾಸು ಹಂಚಿಕೆ ಕುರಿತು ವಾದ–ಪ್ರತಿವಾದಗಳಿಗೆ ವೇದಿಕೆಯಾಯಿತು.

ADVERTISEMENT

ಮಂಗಳವಾರದ ಕಲಾಪದ ವೇಳೆ ತಾವು ಅರ್ಧಕ್ಕೆ ನಿಲ್ಲಿಸಿದ್ದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಕಾಂಗ್ರೆಸ್‌ನ ಐವನ್‌ ಡಿಸೋಜ ಶುಕ್ರವಾರ ಮುಂದುವರೆಸಿದರು.

‘ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ರಾಜ್ಯಪಾಲರ ಭಾಷಣವನ್ನು ರಾಜ್ಯ ಸರ್ಕಾರ ಬಳಸಿಕೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಕರ್ನಾಟಕದ ಸಂದರ್ಭದಲ್ಲಿಯೇ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಹೀಗಾಗಿ ನರೇಗಾ ಕುರಿತಾಗಿ ಕೇಂದ್ರದ ನಡೆಯನ್ನು ಟೀಕಿಸುವುದು ಅಪರಾಧವೇನೂ ಇಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾಗಿ ಈ ಬಗ್ಗೆ ದನಿ ಎತ್ತಬೇಕಾದುದು ಅವರ ಕರ್ತವ್ಯ. ಲೋಕಸಭೆ–ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೂ ಇಂಥದ್ದೇ ಗುರುತರ ಹೊಣೆ ಇದೆ. ಆದರೆ ರಾಜ್ಯದ ಸಂಸದರು ಒಮ್ಮೆಯೂ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ದನಿ ಎತ್ತಲೇಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

ಚರ್ಚೆಯಲ್ಲಿ ಭಾಗಿಯಾದ ಛಲವಾದಿ ನಾರಾಯಣಸ್ವಾಮಿ, ‘ರಾಷ್ಟ್ರಪತಿ ಅವರ ಅಂಕಿತದ ಬಳಿಕ ಜಾರಿಗೆ ಬಂದಿರುವ ಕಾಯ್ದೆಯ ವಿರುದ್ಧದ ಅಂಶಗಳು ಭಾಷಣದಲ್ಲಿ ಇದ್ದವು. ಅದನ್ನು ಓದಿದರೆ ರಾಷ್ಟ್ರಪತಿಗೆ ಅಗೌರವ ತೋರಿದಂತಾಗುತ್ತಿತ್ತು. ಹೀಗಾಗಿ ರಾಜ್ಯಪಾಲರು ಆ ಅಂಶಗಳನ್ನು ಓದಿಲ್ಲ’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ಕೆ.ಶಿವಕುಮಾರ್‌, ‘ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಂವಿಧಾನದ ಪರಿಷ್ಕರಣೆ ಆಗಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಆಗಿನ ರಾಷ್ಟ್ರಪತಿ ಕೆ.ಆರ್‌.ನಾರಾಯಣ್‌ ಅವರು, ‘ಸಂವಿಧಾನವು ವಿಫಲವಾಗಿದೆಯೇ ಅಥವಾ ನಾವು ಅದನ್ನು ವಿಫಲಗೊಳಿಸುತ್ತಿದ್ದೇವೆಯೇ’ ಎಂದು ಆಕ್ಷೇಪ ಎತ್ತಿದ್ದರು. ಹೀಗಿದ್ದೂ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಸರ್ಕಾರದ ಭಾಷಣವನ್ನು ಪೂರ್ತಿ ಓದಿದ್ದರು. ರಾಜ್ಯಪಾಲರೂ ಹೀಗೇ ಮಾಡಬಹುದಿತ್ತು. ಅದರಿಂದ ರಾಷ್ಟ್ರಪತಿ ಅವರಿಗೆ ಅವಮಾನವೇನೂ ಆಗುತ್ತಿರಲಿಲ್ಲ’ ಎಂದು ಪಟ್ಟು ಹಾಕಿದರು.

ಸಂಘಪ್ಪ–ನುಂಗಪ್ಪ ಕತೆ

ನರೇಗಾ ಯೋಜನೆ ಅಡಿ ಬಿಡುಗಡೆಯಾದ ಎಲ್ಲ ಹಣವೂ ನುಂಗಪ್ಪಗಳ ಜೇಬಿಗೆ ಹೋಗುತ್ತಿತ್ತು. ನುಂಗಪ್ಪಗಳ ಹಾವಳಿಗೆ ಕಡಿವಾಣ ಹಾಕಬೇಕೆಂದೇ ವಿಬಿ ಜಿ ರಾಮ್‌ ಜಿ ಜಾರಿಗೆ ತರಲಾಗಿದೆ. ಗಾಂಧೀಜಿ ಅವರ ರಾಮ ರಾಜ್ಯವನ್ನು ನನಸು ಮಾಡಲು ಜಿ ರಾಮ್‌ ಜಿ ಬಂದಿದ್ದಾನೆ. ಇದಕ್ಕೆ ಸಂಘಪ್ಪನನ್ನು ಏಕೆ ಪ್ರಶ್ನಿಸಬೇಕು. ಪತ್ರಿಕೆಗಳಿಗೆ ಗಾಂಧೀಜಿ–ಸಂಘಪ್ಪನ ಜಾಹೀರಾತು ನೀಡಲು ಸರ್ಕಾರ ಹಣ ವೆಚ್ಚ ಮಾಡುತ್ತಿದೆ.
ಛಲವಾದಿ ನಾರಾಯಣಸ್ವಾಮಿ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ
ನೀವು ಹೇಳಿದ ನುಂಗಪ್ಪಗಳ ಕತೆ ನಿಜವೇ ಆಗಿದ್ದರೆ ನರೇಗಾ ಅಡಿ ಕೋಟ್ಯಂತರ ಆಸ್ತಿಗಳ ಸೃಜನೆ ಆಗುತ್ತಿರಲಿಲ್ಲ. ನರೇಗಾದಿಂದ ಏನೆಲ್ಲಾ ಅನುಕೂಲವಾಗಿದೆ ಎಂಬುದರ ಬಗ್ಗೆ ಒಂದು ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌ ನೀಡಲಿದ್ದೇನೆ. ದಯವಿಟ್ಟು ಬನ್ನಿ. ಪತ್ರಿಕೆ ನಡೆಸುವುದು ಸುಲಭವಲ್ಲ. ಹಲವು ರಾಜಕಾರಣಿಗಳು ಪತ್ರಿಕೆ ಆರಂಭಿಸಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಜಾಹೀರಾತುಗಳು ಇಲ್ಲದೆ ಪತ್ರಿಕೆಗಳು ಹೇಗೆ ನಡೆಯಬೇಕು? ಇಂತಹ ಜಾಹೀರಾತುಗಳು ಇನ್ನಷ್ಟು ಬರಬೇಕು.
ಕೆ.ಶಿವಕುಮಾರ್‌ ಕಾಂಗ್ರೆಸ್‌ ಸದಸ್ಯ

ಜಿಎಸ್‌ಟಿ ಸಭೆಗೆ ಯಾರು ಹೋಗಬೇಕು...

ಐವನ್‌ ಡಿಸೋಜ ಅವರು ‘ಕೇಂದ್ರ ಸರ್ಕಾರವು ರಾಜ್ಯದಿಂದ ₹1.60 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿದ್ದರೂ ನಮಗೆ ಅದರಲ್ಲಿ ಅತ್ಯಂತ ಕಡಿಮೆ ಪಾಲು ದೊರೆಯುತ್ತಿದೆ’ ಎನ್ನುತ್ತಿದ್ದಂತೆ ಆಕ್ಷೇಪ ಎತ್ತಿದ ಬಿಜೆಪಿಯ ಎಚ್‌.ವಿಶ್ವನಾಥ್ ‘ನಿಮ್ಮ ಮುಖ್ಯಮಂತ್ರಿ ಜಿಎಸ್‌ಟಿ ಸಭೆಗೆ ಒಮ್ಮೆಯೂ ಹಾಜರಾಗಿಲ್ಲ. ಸಭೆಗೆ ಹಾಜರಾಗದೆ ಇಲ್ಲಿ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ’ ಎಂದರು.

ಸಚಿವ ಪ್ರಿಯಾಂಕ್‌ ಖರ್ಗೆ ‘ಜಿಎಸ್‌ಟಿ ಮಂಡಳಿ ಸಭೆಗೆ ಮುಖ್ಯಮಂತ್ರಿಯೇ ಹಾಜರಾಗಬೇಕು ಎಂಬ ನಿಯಮವಿಲ್ಲ. ಮುಖ್ಯಮಂತ್ರಿ ತಮ್ಮ ಪರವಾಗಿ ಸಮರ್ಥ ಸಚಿವರನ್ನು ನಿಯೋಜಿಸಬಹುದು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಸವರಾಜ ಬೊಮ್ಮಾಯಿ ಅವರನ್ನು ಜಿಎಸ್‌ಟಿ ಮಂಡಳಿ ಸಭೆಗೆ ನಿಯೋಜನೆ ಮಾಡಿದ್ದರು. ಅದೇ ರೀತಿ ಸಿದ್ದರಾಮಯ್ಯ ಅವರು ಸಚಿವ ಕೃಷ್ಣ ಬೈರೇಗೌಡ ಅವರನ್ನು ನಿಯೋಜನೆ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು. ವಿಶ್ವನಾಥ್ ಅವರು ಸುಮ್ಮನೆ ಕುಳಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.