ADVERTISEMENT

Karnataka Legislative Council: ಗಮನ ಸೆಳೆಯುವ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
   

ಕಾರ್ಯದರ್ಶಿ ಹಾಜರಿಗೆ ಹೊರಟ್ಟಿ ಸೂಚನೆ

ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ವಿಧಾನಪರಿಷತ್‌ನಿಂದ ನಾಮನಿರ್ದೇಶನ ಪ್ರಸ್ತಾವ ಸಲ್ಲಿಸಿದ್ದರೂ, ಕ್ರಮಕೈಗೊಳ್ಳದ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ, ಕುಲಪತಿ, ಕುಲಸಚಿವರು ಹಾಜರಾಗಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್‌ ನೀಡಿದರು.

ಕಾಂಗ್ರೆಸ್‌ನ ಪುಟ್ಟಣ್ಣ ಮಾತನಾಡಿ,  ವಿಧಾನಪರಿಷತ್‌ನಿಂದ ಒಬ್ಬರನ್ನು ನಾಮನಿರ್ದೇಶನ ಮಾಡಿದ್ದರೂ, ಕ್ರಮ ಕೈಗೊಂಡಿಲ್ಲ. ಪರಿಷತ್‌ ನಿರ್ಣಯಕ್ಕೆ ಮಾನ್ಯತೆ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

‘ಮೂವರೂ ಮಾರ್ಚ್‌ 20ರಂದು ಬೆಳಿಗ್ಗೆ 10.30ಕ್ಕೆ ಸಭಾಪತಿಗಳ ಮುಂದೆ ಹಾಜರಾಗಬೇಕು. ಅವರನ್ನು ಕರೆಯಿಸಿ’ ಎಂದು ಸಭಾನಾಯಕರಿಗೆ ಹೊರಟ್ಟಿ ಸೂಚಿಸಿದರು.

ADVERTISEMENT

ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ 

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ವಾರದಲ್ಲಿ ಎರಡು ತರಗತಿಗಳನ್ನು ನೈತಿಕ ಶಿಕ್ಷಣಕ್ಕಾಗಿ ಮೀಸಲಿಡಲಾಗುವುದು. ಈ ಅವಧಿಯಲ್ಲಿ ನೀತಿ ಕಥೆಗಳ ಮೂಲಕ ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ, ಧೈರ್ಯ, ಪ್ರೀತಿ, ಗೌರವ, ಆತ್ಮವಿಶ್ವಾಸ ಮೂಡಿಸಲಾಗುವುದು. 8ರಿಂದ 12ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಎರಡು ತರಗತಿ ಲೈಂಗಿಕತೆಯ ಅರಿವು ಮೂಡಿಸುವ ಶಿಕ್ಷಣ ನೀಡಲಾಗುವುದು. ಹೆಣ್ಣು ಮಕ್ಕಳಿಗೆ ಈಗಾಗಲೇ ಕರಾಟೆ ಕಲಿಸಲಾಗುತ್ತಿದೆ. ಸೈಬರ್‌ ವ್ಯಸನ ಮುಕ್ತಿಗೆ ಕ್ರಮ ವಹಿಸಲಾಗಿದೆ.

ವಿಧಾನಪರಿಷತ್‌ನಲ್ಲಿ ‘ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ನಡೆದ ಸುದೀರ್ಘ ಚರ್ಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉತ್ತರ

ತೊಗರಿ ಬೆಳೆ ನಷ್ಟ; ಸಿ.ಎಂ ಜತೆ ಚರ್ಚೆ

ರೋಗ ಬಾಧೆಯಿಂದ ಸಂಕಷ್ಟದಲ್ಲಿರುವ ತೊಗರಿ ಬೆಳೆಗಾರರಿಗೆ ಪರಿಹಾರದ ವಿಶೇಷ ಪ್ಯಾಕೇಜ್‌ ನೀಡುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ನಿರ್ಧಾರ ಪ್ರಕಟಿಸಲಾಗುವುದು. ತೊಗರಿ ಬೆಳೆ ಪ್ರದೇಶದ ಶಾಸಕರ ಸಭೆ ಕರೆದು ಹೆಚ್ಚಿನ ಮಾಹಿತಿ ಪಡೆಯಲಾಗುವುದು. ರೈತರು ಬೆಳೆವಿಮೆ ಮಾಡಿಸುವ ಮೂಲಕ ಪರಿಹಾರ ಪಡೆಯಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. 

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಸಚೇತಕ ಎನ್‌. ರವಿಕುಮಾರ್‌, ಶಶೀಲ್‌ ನಮೋಶಿ, ತಳವಾರ ಸಾಬಣ್ಣ ಪ್ರಶ್ನೆಗೆ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಉತ್ತರ

ಶಿಕ್ಷಕರ ಬಡ್ತಿ; ವರದಿ ನಂತರ ಕ್ರಮ

ಅಧಿಕಾರಿಗಳ ಸಮಿತಿ ವರದಿ ಸ್ವೀಕೃತವಾದ ನಂತರ ಪದವಿ ಪಡೆದ 58 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಸೌಲಭ್ಯ ದೊರಕಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಕುರಿತು ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಿಸಲಾದ ಸಮಿತಿಯ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು. 

ಕಾಂಗ್ರೆಸ್‌ನ ರಾಮೋಜಿಗೌಡ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.