ADVERTISEMENT

9 ದಿನ, 54 ಗಂಟೆ ನಡೆದ ವಿಧಾನ ಪರಿಷತ್‌ ಕಲಾಪ ಧರಣಿಯೊಂದಿಗೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 14:26 IST
Last Updated 22 ಆಗಸ್ಟ್ 2025, 14:26 IST
<div class="paragraphs"><p>ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು &nbsp;</p></div>

ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು  

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಒಂಬತ್ತು ದಿನಗಳಲ್ಲಿ ಒಟ್ಟು 54 ಗಂಟೆಯಷ್ಟು ನಡೆದ ವಿಧಾನ ಪರಿಷತ್ತಿನ ಕಲಾಪವು, ಕಡೆಯ ದಿನ ವಿರೋಧ ಪಕ್ಷಗಳ ಸದಸ್ಯರ ಧರಣಿಯೊಂದಿಗೆ ಕೊನೆಗೊಂಡಿತು.

ADVERTISEMENT

ಶುಕ್ರವಾರದ ಕಲಾಪದಲ್ಲಿ ಪ್ರಶ್ನೋತ್ತರಕ್ಕೂ ಮುನ್ನ ಬಿಜೆಪಿಯ ಶಶಿಲ್‌ ಜಿ. ನಮೋಷಿ ಅವರು ಒಂದು ವಿಚಾರ ಪ್ರಸ್ತಾಪ ಮಾಡಲು ಅನುಮತಿ ಕೇಳಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಷಯ ಪ್ರಸ್ತಾಪಿಸುವಂತೆ ಸೂಚಿಸಿದರು.

ನಮೋಷಿ ಅವರು, ‘ಇದೇ 27ರಂದು ಗಣೇಶನ ಹಬ್ಬವಿದೆ. ಈ ಸಂದರ್ಭದಲ್ಲಿ ರಾತ್ರಿ 10ರ ನಂತರ ಡಿ.ಜೆ ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ತಿಲಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದಾಗ ಬ್ರಿಟಿಷರೇ ಅಡ್ಡಿಪಡಿಸಿರಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ನಮ್ಮ ಹಬ್ಬಕ್ಕೆ ಅಡಚಣೆ ಮಾಡುತ್ತಿದೆ’ ಎಂದು ತಕರಾರು ಎತ್ತಿದರು.

ಸಭಾನಾಯಕ ಎನ್‌.ಎಸ್‌.ಭೋಸರಾಜು, ‘ಆಯಾ ಜಿಲ್ಲೆಯಲ್ಲಿನ ಸ್ಥಿತಿಗತಿಯನ್ನು ನೋಡಿಕೊಂಡು ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ’ ಎಂದರು.

ಅವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ‘ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು. ಸಭಾನಾಯಕರು ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದಾಗ, ‘ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿದರು.  

ಆಗ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಎದುರಿಗೆ ಧಾವಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಪತಿ ಹೊರಟ್ಟಿ ಅವರು ಪರಿಷತ್ತಿನ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.