ADVERTISEMENT

ವಿಧಾನಪರಿಷತ್‌ ಸಭಾಪತಿ ಆಯ್ಕೆಗೆ ಇಂದು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:44 IST
Last Updated 7 ಫೆಬ್ರುವರಿ 2021, 15:44 IST
ವಿಧಾನ ಪರಿಷತ್‌ನ ಸಭಾಪತಿ ಸ್ಥಾನ
ವಿಧಾನ ಪರಿಷತ್‌ನ ಸಭಾಪತಿ ಸ್ಥಾನ    

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮಂಗಳವಾರ (ಫೆ. 9) ಚುನಾವಣೆ ನಡೆಯಲಿದೆ. ಸೋಮವಾರ (ಫೆ. 8) ಮಧ್ಯಾಹ್ನ 12 ಗಂಟೆಯ ಒಳಗೆ ನಾಮಪತ್ರ ಸಲ್ಲಿಸಬೇಕು.

ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆಯಿಂದ ಸಭಾಪತಿ ಸ್ಥಾನ ತೆರವಾಗಿದೆ. ಬಿಜೆಪಿ ಬೆಂಬಲದಲ್ಲಿ ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ. ನಜೀರ್‌ ಅಹ್ಮದ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಲು ನಿರ್ಧರಿಸಿದೆ.

75 ಸದಸ್ಯ ಬಲದ ಪರಿಷತ್‌ನಲ್ಲಿ 31 ಸದಸ್ಯರನ್ನು ಹೊಂದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. ಜೆಡಿಎಸ್‌ 13 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ನ 28, ಪಕ್ಷೇತರ ಒಬ್ಬರು ಇದ್ದಾರೆ. ಒಂದು ಸ್ಥಾನ ಈ ಖಾಲಿ ಇದೆ. ಸಂಖ್ಯಾ ಬಲದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಯ ಅಭ್ಯರ್ಥಿ ಹೊರಟ್ಟಿ ಆಯ್ಕೆಯಾಗುವುದು ಖಚಿತವಾಗಿದೆ.

ADVERTISEMENT

ಸಭಾಪತಿ- ಉಪ ಸಭಾಪತಿ ಚುನಾವಣೆಯಲ್ಲಿ ಗೆಲ್ಲುವಷ್ಟು ಸಂಖ್ಯಾ ಬಲ ಇಲ್ಲದಿದ್ದರೂ ಜೆಡಿಎಸ್‍ನ ಜಾತ್ಯತೀತ ಸಿದ್ಧಾಂತವನ್ನು ಬಯಲು ಮಾಡಬೇಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಒತ್ತಾಸೆಯಂತೆ ಕೆ.ಸಿ. ಕೊಂಡಯ್ಯ ಅವರನ್ನು ಉಪ ಸಭಾಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಇದೀಗ ನಸೀರ್ ಅಹಮ್ಮದ್ ಅವರನ್ನು ಸಭಾಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ.

‘ಸಭಾಪತಿ ಆಯ್ಕೆಗೂ ಚುನಾವಣೆ ನಡೆಯಬೇಕು. ಆ ಮೂಲಕ, ಜೆಡಿಎಸ್- ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿದೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಬೇಕು. ವಿಧಾನಪರಿಷತ್‍ನ ಸಭಾ ನಡವಳಿಕೆಗಳಲ್ಲಿ ಇದು ದಾಖಲಾಗಬೇಕು’ ಎಂಬುದು ಕಾಂಗ್ರೆಸ್‍ನ ನಿಲುವು ಎನ್ನಲಾಗಿದೆ.

ಪರಿಷತ್‌ನಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತ ಇಲ್ಲದೇ ಇರುವುದರಿಂದ ಮಸೂದೆಗಳು ಅಂಗೀಕಾರಗೊಳ್ಳಲು ಜೆಡಿಎಸ್ ಜೊತೆಗಿನ ಈ ಮೈತ್ರಿ ನೆರವಿಗೆ ಬರಲಿದೆ.

ಸೋಮವಾರ ಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಜೆಡಿಎಸ್‌ ಈ ಮಸೂದೆಯನ್ನು ವಿರೋಧಿಸಿದ ಸಭಾತ್ಯಾಗ ಮಾಡಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.